ಜಿಲ್ಲೆ

ಡಿಸಿಸಿ ಬ್ಯಾಂಕ್​ ಬೆಳವಣಿಗೆಗೆ ಟೀಕಾಕಾರರು ಪ್ರೇರಣೆ : ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ, ಬ್ಯಾಂಕಿಗೆ 9 ಕೋಟಿ ರೂ. ಲಾಭ

ಕೋಲಾರ: ಕಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್​ 8 ವರ್ಷಗಳಲ್ಲಿ ನಿರೀೆಗೂ ಮೀರಿ ಬೆಳೆಯಲು, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆಗೈಯ್ಯಲು ಟೀಕಾಕಾರರು ಕಾರಣ. ನಾವು ಎಚ್ಚರಿಕೆಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದವರಿಗೆ ಧನ್ಯವಾದಗಳು ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಟಾಂಗ್​ ನೀಡಿದರು.

ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಸೋಮವಾರ ಆರ್ಥಿಕ ವರ್ಷದ ಮೊದಲ ಸಭೆ ನಡೆಸಿ, ಆಡಳಿತ ಮಂಡಳಿಯ ಸತತ ಪ್ರಯತ್ನ, ಹೋರಾಟ, ಸಿಬ್ಬಂದಿಯ ಪರಿಶ್ರಮದಿಂದ ಎನ್​ಪಿಎ ಶೇ.2.12ಕ್ಕೆ ಇಳಿದಿರುವುದಲ್ಲದೆ, 2021&22ನೇ ಸಾಲಿನಲ್ಲಿ 9 ಕೋಟಿ ರೂ. ಲಾಭ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕಿನ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರು ನಮ್ಮ ಮೇಲೆ ವಿನಾಕಾರಣ ಮುಗಿಬಿದ್ದು ಟೀಕೆ ಮಾಡಿದ್ದರು. ಇದರಿಂದ ಸಾರ್ವಜನಿಕರು, ಸಹಕಾರಿಗಳು ಹಾಗೂ ಗ್ರಾಹಕರಲ್ಲಿ ಗೊಂದಲ, ಅನುಮಾನ ಉಂಟಾಗಿತ್ತು. ಒಂದು ವೇಳೆ ನಾವು ಆರೋಪಗಳಿಗೆ ಕುಗ್ಗಿದ್ದರೆ ಬ್ಯಾಂಕ್​ ಉಳಿಯುತ್ತಿರಲಿಲ್ಲ. ಸುಳ್ಳು ಆರೋಪ ಮಾಡುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ, ಬ್ಯಾಂಕ್​ಗೆ ಯಾವುದೇ ಹಾನಿ ಆಗದಿರಲಿ ಎಂದು ದೇವರಲ್ಲಿ ಪ್ರತಿದಿನ ಕೈಮುಗಿದು ಬೇಡುತ್ತಿದ್ದೆ ಎಂದರು.

ಎನ್​ಪಿಎ ಪ್ರಮಾಣ ಕುಸಿತ, 9 ಕೋಟಿ ರೂ. ಲಾಭಕ್ಕೆ ನಾವ್ಯಾರು ಹಿಗ್ಗಬೇಕಾಗಿಲ್ಲ. ಬ್ಯಾಂಕಿನ ಬಗ್ಗೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟಿರುವ ಗ್ರಾಹಕರ ಹಾಗೂ ಸಾಲ ಸೌಲಭ್ಯಕ್ಕಾಗಿ ನಿರೀೆಯಲ್ಲಿರುವ ರೈತರು, ಮಹಿಳೆಯರ ವಿಶ್ವಾಸ ಉಳಿಸಿಕೊಳ್ಳುವುದು ಮುಂದೆ ಇರುವ ದೊಡ್ಡ ಸವಾಲು ಆಗಿದೆ. ಆನ್​ಲೈನ್​ ವ್ಯವಸ್ಥೆ ಜಾರಿಯಲ್ಲಿರುವುದರಿಂದ ನಾವಾಗಲಿ, ಸಿಬ್ಬಂದಿಯಾಗಲಿ ತಪ್ಪು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಕೆಲಸ ಕಾರ್ಯ ವಿಳಂಬವಾದರೆ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ವ್ಯತ್ಯಾಸವಾದಲ್ಲಿ ತಲೆ ತಗ್ಗಿಸಬೇಕಾಗುವುದರಿಂದ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಿಬ್ಬಂದಿಗೆ ತಾಕೀತು ಮಾಡಿದರು.

ಸರ್ಕಾರದಿಂದ ಬರಬೇಕಾಗಿರುವ ಬಡ್ಡಿ ಹಣ ಬಿಟ್ಟು 9 ಕೋಟಿ ಲಾಭಾಂಶದ ಸಾಧನೆ ಮಾಡಲು ಬ್ಯಾಂಕಿನ ಸಿಬ್ಬಂದಿ, ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಶ್ರಮ ಕಾರಣವಾಗಿದೆ. ಸಾಧನೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು.

ಏಪ್ರಿಲ್​ ಅಂತ್ಯದೊಳಗೆ ಪ್ರತಿ ಸೊಸೈಟಿಯ ಲೆಕ್ಕ ಪರಿಶೋಧನೆಯಾಗಬೇಕು. ಆನ್​ಲೈನ್​ ವ್ಯವಸ್ಥೆ ಆಗಿಯೂ ಲೆಕ್ಕಪರಿಶೋಧನೆ ಮಾಡದೇ ಇರುವುದು ವಿಷಾದಕರ ಸಂಗತಿ. ಹೆಲ್ಪ್​ ಡೆಸ್ಕ್​ ಸ್ಥಾಪನೆ ಮಾಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಎರಡು ದಿನದಲ್ಲಿ ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ಆನ್​ಲೈನ್​ ಅಳವಡಿಕೆ ಉಸ್ತುವಾರಿ ವಹಿಸಿರುವ ಏಜೆನ್ಸಿ ಬದಲಾವಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಲ ಕೊಡುವುದು, ವಸೂಲಿ ಮಾಡುವುದು ನಿಮ್ಮ ಜವಾಬ್ದಾರಿ. ಇದರಿಂದಾಗಿ ಪ್ರತಿ ದಿನ ಏನು ಕೆಲಸ ಮಾಡಬೇಕು ಎಂದು ವೇಳಾಪಟ್ಟಿ ತಯಾರಿಸಿಕೊಳ್ಳಿ. ಅದರ ಪ್ರಕಾರ ಕೆಲಸ ಮಾಡಿದರೆ ನೀಡಿರುವ ಗುರಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್​ ಮಾತನಾಡಿ, ತಾಂತ್ರಿಕ ದೋಷ ಸರಿಪಡಿಸಲು ವಿ&ಸಾಫ್ಟ್​ ಕಂಪನಿಯವರಿಗೆ ಹೆಲ್ಪ್​ ಡೆಸ್ಕ್​ ಸ್ಥಾಪನೆಗೆ ಸೂಚಿಸಲಾಗಿತ್ತು. ಬಹುತೇಕ ಕಾರ್ಯದರ್ಶಿಗಳಿಗೆ ಕಂಪ್ಯೂಟರ್​ ತರಬೇತಿಯಿಲ್ಲ. ಈ ವಿಚಾರದಲ್ಲಿ ಗಂಭೀರತೆ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಡಿ ಶಿವಕುಮಾರ್​, ಡಿಸಿಸಿ ಬ್ಯಾಂಕ್​ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್​, ಬ್ಯಾಂಕಿನ ಕೃಷ್ಣಮೂರ್ತಿ, ಎಜಿಎಂಗಳಾದ ಖಲೀಮುಲ್ಲಾ, ಬಾಲಾಜಿ, ಬೈರೇಗೌಡ, ಹುಸೇನ್​ ಸಾಬ್​ ದೊಡ್ಡಮುನಿ ಉಪಸ್ಥಿತರಿದ್ದರು.

ಇ-ಶಕ್ತಿ ಕಾರ್ಯಕ್ರಮ ಯಾವುದೇ ಕಾರಣಕ್ಕೂ ನಿಲ್ಲಬಾರದು. ಮೈಕ್ರೋ ಎಟಿಎಂ ಬಳಕೆ ಮಾಡಬೇಕು. ಮೊಬೈಲ್​ ಬ್ಯಾಂಕ್​ ವಾಹನ ಕಳುಹಿಸಿಕೊಡಿ ಎಂದು ಬೇಡಿಕೆ ಇಡಬೇಕು. ಮಧ್ಯಮ ಅವಧಿ ಸಾಲ ಹತ್ತು ಲಕ್ಷಕ್ಕೆ ಮೀರಬಾರದು. ಅದು ಸೊಸೈಟಿ ಮೂಲಕವೇ ಬರಬೇಕು. ಯಾವುದೇ ಕಾರಣಕ್ಕೂ ಶಾಖೆಯಿಂದ ಸಾಲ ಕೊಡುವುದು ಆಗಬಾರದು ಎಂದು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.