ಜಿಲ್ಲೆ

ಡಿಸಿಸಿ ಬ್ಯಾಂಕ್‌ಗೆ ಬೇಕಿದೆಹೊಸ ಆಡಳಿತ ಮಂಡಳಿ

ಭಾಲ್ಕಿ : ಜಿಲ್ಲೆ ರೈತರ ಜೀವನಾಡಿ ಬೀದರ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಹಲವು ವರ್ಷಗಳಿಂದ ಒಬ್ಬರ ಹಿಡಿತದಲ್ಲಿದೆ. ಸರ್ಕಾರದ ಸೌಕರ್ಯ, ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಆಡಳಿತ ಮಂಡಳಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಕರೆದಿದ್ದ ಡಿಸಿಸಿ ಬ್ಯಾಂಕ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರದ ಯೋಜನೆಗಳ ಲಾಭ ಸಮರ್ಪಕ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮಧ್ಯಮಾವಧಿ, ದೀರ್ಘಾವಧಿ ಸಾಲ ಸೇರಿ ಅರ್ಹರಿಗೆ ಸಿಗಬೇಕಿದ್ದ ವಿವಿಧ ಸೌಲಭ್ಯ ಮರೀಚಿಕೆಯಾಗಿದೆ. ಸರ್ಕಾರದಿಂದ ಕೊಡುವ ೩ರಿಂದ ೫ ಲಕ್ಷ ರೂ.ವರೆಗಿನ ಶೂನ್ಯ ಬಡ್ಡಿದರ ಸಾಲ ಕೂಡ ರೈತರಿಗೆ ಸಿಗುತ್ತಿಲ್ಲ ಎಂದು ದೂರಿದರು.

ಅರ್ನಹರಿಗೆ ಬೇಕಾಬಿಟ್ಟಿ ಸಾಲ ಕೊಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ಗಳ ಮೇಲೆ ಹಿಡಿತ ಸಾಧಿಸಲಾಗುತ್ತಿದೆ. ಬ್ಯಾಂಕ್‌ನ ಪ್ರಗತಿ ನಿಂತು ಹೋಗಿದೆ. ಸ್ಥಿತಿ ಹೀಗೇ ಮುಂದುವರಿದರೆ ಸಂಕಷ್ಟ ಎದುರಿಸಲಿದೆ ಎಂದು ಹೇಳಿದರು.

ಸಹೋದರ ಅಮರ ಖಂಡ್ರೆ ಎರಡು ಅವಧಿಗೆ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಬ್ಯಾಂಕ್‌ನ ಆಡಳಿತ ಮಂಡಳಿಗೆ ಅ.೪ರಂದು ಚುನಾವಣೆ ನಡೆಯಲಿದ್ದು, ಅಮರ ಖಂಡ್ರೆ ನೇತೃತ್ವದ ಪೆನಾಲ್ ಬೆಂಬಲಿಸುವAತೆ ಮನವಿ ಮಾಡಿದರು.
ಪ್ರಕಾಶ ಮಾಶೆಟ್ಟೆ ಮಾತನಾಡಿದರು. ಅಮರ ಖಂಡ್ರೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ವೈಜಿನಾಥ ಪಾಟೀಲ್, ಅಶೋಕರಾವ ಸೋನಜಿ, ಬಸವರಾಜ ವಂಕೆ, ಪ್ರವೀಣ ಹಣಮಶೆಟ್ಟಿ, ಹಣಮಂತರಾವ ಚವ್ಹಾಣ್, ರಮೇಶ ಚಿದ್ರಿ ಇತರರಿದ್ದರು.