ಜಿಲ್ಲೆ

ಡಿಸಿಸಿ ಬ್ಯಾಂಕ್‌ಗೆ 8.30 ಕೋಟಿ ರೂ. ನಿವ್ವಳ ಲಾಭ

ಚಿತ್ರದುರ್ಗ: ಡಿಸಿಸಿ ಬ್ಯಾಂಕ್ 2024-25ನೇ ಸಾಲಿನಲ್ಲಿ 1338.40 ಕೋಟಿ ರೂ.ವಹಿವಾಟು ನಡೆಸಿ, 8.30 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಬ್ಯಾಂಕ್‌ಗೆ ಸರ್ಕಾರ ಅಥವಾ ಇನ್ನಾವುದೇ ಮೂಲದಿಂದ ಅನುದಾನ ಲಭ್ಯವಿಲ್ಲ. ಠೇವಣಿ ಮೊತ್ತ,ನಬಾರ್ಡ್, ಅಪೆಕ್ಸ್ ಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ ರೈತರಿಗೆ ಸಾಲ ವಿತರಿಸಲಾಗುತ್ತಿದೆ. ಬ್ಯಾಂಕ್ ಆರಂಭದಲ್ಲಿ ಅಂದಾಜು 25 ವರ್ಷಗಳ ಹಿಂದೆ ಸರ್ಕಾರ 1ಕೋಟಿ ಷೇರು ಹಣ ಕೊಟ್ಟಿದ್ದು, ನಂತರದಲ್ಲಿ ಯಾವುದೇ ಆರ್ಥಿಕ ನೆರವು ಒದಗಿಸಿಲ್ಲ. ಆದರೂ ಬ್ಯಾಂಕ್ ರೈತರಿಗೆ ನಿರಂತರವಾಗಿ ಆರ್ಥಿಕ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಎಲ್ಲ ಸದಸ್ಯ ಸಹಕಾರ ಸಂಘಗಳು ಬದ್ಧತೆಯಿಂದ ಕೆಲಸ ನಿರ್ವಹಿಸಿ, ಸುಸ್ತಿ ಸಾಲ ಮರುಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿ ಆಗುತ್ತದೆ. ನಾನಾ ಸಾಲ ಸೌಲಭ್ಯಗಳನ್ನು ನೀಡಲು ಅನುಕೂಲವಾಗುತ್ತದೆ ಎಂದರು.

2024-25ನೇ ಸಾಲಿನಲ್ಲಿ ಕೃಷಿ ಉದ್ದೇಶಗಳಿಗಾಗಿ 56,950 ರೈತರಿಗೆ 4,889.52 ಲಕ್ಷ ರೂ.ಬೆಳೆ ಸಾಲ ವಿತರಿಸಲಾಗಿದೆ. 2025-26ನೇ ಸಾಲಿಗೆ 3000 ಹೊಸ ರೈತರಿಗೆ 15 ಕೋಟಿ ರೂ. ಅಲ್ಪಾವಧಿ ಕೃಷಿ ಬೆಳೆ ಸಾಲ, 1000 ಹೊಸ ರೈತರಿಗೆ 52 ಕೋಟಿ ರೂ. ಮಧ್ಯಮಾವಧಿ ಮತ್ತು 285.10 ಕೋಟಿ ರೂ. ಕೃಷಿಯೇತರ ಸಾಲ ವಿತರಿಸುವ ಗುರಿ ಇದೆ.

2025ರ ಮಾರ್ಚ್ 31ರ ಅಂತ್ಯಕ್ಕೆ ಸಂಗ್ರಹಿಸಿರುವ 630.68 ಕೋಟಿ ರೂ.ಠೇವಣಿ ಮೊತ್ತವನ್ನು 2025-26ನೇ ಸಾಲಿನಲ್ಲಿ 739.68 ಕೋಟಿ ರೂ.ಗೆ ಏರಿಸುವ ಗುರಿ ಇದೆ ಎಂದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ನಿರ್ದೇಶಕ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಉಪಾಧ್ಯಕ್ಷ ಎಚ್.ಬಿ. ಮಂಜುನಾಥ್, ನಿರ್ದೇಶಕರಾದ ಮಾಧುರಿ ಗಿರೀಶ್, ಎಚ್.ಟಿ. ನಾಗರೆಡ್ಡಿ, ಎಂ. ನಿಶಾನಿ ಜಯಣ್ಣ, ವಿನೋದಸ್ವಾಮಿ, ಕೆ. ಜಗಣ್ಣ, ಎಚ್.ಎಂ. ದ್ಯಾಮಣ್ಣಕೋಗುಂಡೆ, ರಘುರಾಮರೆಡ್ಡಿ, ಪಿ. ತಿಪ್ಪೇಸ್ವಾಮಿ, ಟಿ. ಮಹಾಂತೇಶ್, ಡಾ.ಕೆ. ಅನಂತ್, ಒ. ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ಉಲ್ಲಾ ಷರೀಫ್, ಸಹಕಾರ ಸಂಘಗಳ ಉಪ ನಿಬಂಧಕ ಆರ್.ಎಸ್. ದಿಲೀಪ್‌ಕುಮಾರ್, ವೃತ್ತಿಪರ ನಿರ್ದೇಶಕರಾದ ಎ. ಸುಮಂತ್, ಸಿ.ಇ. ಮಹೇಶ್ವರಪ್ಪ ಇತರರು ಇದ್ದರು.

......ಕೋಟ್.......

ಸಿಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ.ಪ್ರಸ್ತುತ ಸಾಲಿನಲ್ಲಿ ಬ್ಯಾಂಕಿನ ಸದಸ್ಯರಿಗೆ ಶೇ.2 ಡಿವಿಡೆಂಡ್ ಘೋಷಿಸಲಾಗಿದೆ. ರೈತರು ತಾವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ, ಬ್ಯಾಂಕಿನಿಂದ ಹೆಚ್ಚಿನ ಸಾಲ ಸೌಲಭ್ಯ ಪಡೆಯಬೇಕು. ಬ್ಯಾಂಕಿನ ಅಧ್ಯಕ್ಷ ಡಿ. ಸುಧಾಕರ್ ಅವರು ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಹರ್ಷದ ವಿಚಾರ.

ಟಿ. ರಘುಮೂರ್ತಿ, ಬ್ಯಾಂಕ್ ನಿರ್ದೇಶಕ, ಶಾಸಕ

---