ಜಿಲ್ಲೆ

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ

ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಐದು ನಿರ್ದೇಶಕ ಸ್ಥಾನಗಳಿಗೆ ಸೆ.12ರಂದು ಚುನಾವಣೆ ನಡೆಯಲಿದ್ದು, ಬ್ಯಾಂಕಿನಲ್ಲಿ ಸ್ಥಾಪಿಸಿರುವ ಐದು ಮತಗಟ್ಟೆಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ.
ಬ್ಯಾಂಕಿನ 12 ನಿರ್ದೇಶಕ ಸ್ಥಾನಗಳ ಪೈಕಿ, ನಾಮಪತ್ರ ಹಿಂಪಡೆಯುವ ಅವಧಿ ಪೂರ್ಣ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿ ಆರು ಜನರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಹೈಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಅವರ ಸಹಿತ ನಾಲ್ವರ ನಾಮಪತ್ರಗಳನ್ನು ಚುನಾವಣಾಧಿಕಾರಿ ಎಂ.ಕಾರ್ತಿಕ್ ಅವರು ಷರತ್ತು ಆಧರಿಸಿ ತಿರಸ್ಕರಿಸಿದ್ದರು ಹಾಗೂ ಹೊಳಲ್ಕೆರೆ, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲೂಕುಗಳ ಡಿ-ಕ್ಷೇತ್ರಕ್ಕೆ ಆಗಿದ್ದ ಅವಿರೋಧ ಆಯ್ಕೆ ಘೋಷಣೆ ತಡೆ ಹಿಡಿದಿದ್ದರು.
ಇಂದೇ ಫಲಿತಾಂಶ ಘೋಷಣೆ: ಮತದಾನದ ಬಳಿಕ ಅಂದು ಸಂಜೆಯೇ ಮತ ಎಣಿಕೆ ನಡೆಯಲಿದ್ದು, ಐದು ಸ್ಥಾನಗಳೊಂದಿಗೆ, ತಡೆಹಿಡಿದಿರುವ ಸ್ಥಾನದ ಫಲಿತಾಂಶವೂ ಘೋಷಣೆಯಾಗಲಿದೆ. ನಿಯಮಪಾಲಿಸದ್ದರಿಂದಾಗಿ ಜಿಲ್ಲೆ 200 ಸಹಕಾರ ಸಂಘಗಳನ್ನು ಅನರ್ಹಗೊಂಡಿದ್ದವು. ಇದರಿಂದಾಗಿ ಹಲವು ಸಹಕಾರಿಗಳಿಗೆ ಸ್ಪರ್ಧೆ ಮತ್ತು ಮತದಾನಕ್ಕೆ ಅವಕಾಶವಿಲ್ಲದಂತಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ರಘುಮೂರ್ತಿ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅನರ್ಹ ಪಟ್ಟಿಯನ್ನು ಎತ್ತಿಹಿಡಿದಿರುವುದರಿಂದಾಗಿ ರಘುಮೂರ್ತಿ, ಇತರರಿಗೆ ಹಿನ್ನೆಡೆಯಾಗಿದೆ. ನಿಕಟಪೂರ್ವ ನಿರ್ದೇಶಕ ರಘುಮೂರ್ತಿ ಮತ್ತೆ ಆಯ್ಕೆ ಬಯಸಿ, ಎ ಕ್ಷೇತ್ರ-ಚಿತ್ರದುರ್ಗ ತಾಲೂಕು ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಾಮಪತ್ರ ಸಲ್ಲಿಸಿದ್ದರು.

*ಕೋಟ್
ನ್ಯಾಯಾಲಯದ ತೀರ್ಪಿಗೆ ತಲೆಬಾಗುವೆ. ಈ ಬಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪ ರ್ಧಿಸಲು ಹಾಗೂ ಮತದಾನ ಮಾಡುವ ತಮಗೆ ಅವಕಾಶ ದೊರೆತಿಲ್ಲ.
ಟಿ.ರಘುಮೂರ್ತಿ, ಶಾಸಕ, ಚಳ್ಳಕೆರೆ