ಜಿಲ್ಲೆ

ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ರೈತರ ಪ್ರತಿಭಟನೆ

ಹನೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಖಂಡಿಸಿ ಭಾನುವಾರ ರೈತ ಸಂಘದ ಪದಾಧಿಕಾರಿಗಳು ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖ್ಯ ರಸ್ತೆಯ ವೃತ್ತದಲ್ಲಿ ನೆರೆದಿದ್ದ ಪದಾಧಿಕಾರಿಗಳು, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ರೈತರು ರಾಮನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಸ್ಯೆಯನ್ನು ಆಲಿಸಲು ತೆರಳಿದ್ದರು. ಈ ವೇಳೆ ಅವರು ರೈತರೊಂದಿಗೆ ಅಸಭ್ಯವಾಗಿ ವರ್ತನೆ ತೋರಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಖಂಡನೀಯ. ಅವರ ವರ್ತನೆ ರೈತರನ್ನು ನಿರ್ಲಕ್ಷ್ಯಿಸಿದಂತಾಗಿದೆ. ಆದ್ದರಿಂದ ಡಿ.ಕೆ.ಶಿವಕುಮಾರ್ ಅವರು ಕೂಡಲೇ ರೈತರಲ್ಲಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಗುವಳಿ ಪತ್ರ ಕೊಡಿಸಿ: ಇದೇ ವೇಳೆ ಮಾತನಾಡಿದ ಅಮ್ಜಾದ್‌ಖಾನ್, ಶಾಸಕ ಎಂ.ಆರ್.ಮಂಜುನಾಥ್ ಅವರು ಸಭೆ ನಡೆಸಿ ರಾಮಾಪುರ ಮಾರ್ಗದಲ್ಲಿ 100 ಅಡಿ ರಸ್ತೆ ವಿಸ್ತರಿಸಲು ಜಾಗ ನೀಡುವಂತೆ ಕೇಳಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ. ಈಗಾಗಲೇ ಈ ಮಾರ್ಗದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆ ವಿಸ್ತರಣೆಯಿಂದ ರೈತರ ಜಮೀನುಗಳು ಸ್ವಾಧೀನಕ್ಕೆ ಒಳಪಡುತ್ತವೆಯೇ ಹೊರತು ಬಂಡವಾಳಶಾಹಿಗಳದ್ದಲ್ಲ. ಆದ್ದರಿಂದ ಈ ನಿರ್ಧಾರವನ್ನು ಕೈ ಬಿಡಬೇಕು. ಇದರ ಬದಲಾಗಿ 57ರ ನಮೂನೆಯಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ದರಖಾಸ್ತ್ ಸಮಿತಿಯಲ್ಲಿ ಸಭೆ ನಡೆಸಿ ಸಾಗುವಳಿ ಪತ್ರವನ್ನು ಕೊಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಪೂಂಗುಡಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಪದಾಧಿಕಾರಿಗಳಾದ ರಾಜಣ್ಣ, ಪಳನಿಸ್ವಾಮಿ, ವೇಲುಸ್ವಾಮಿ, ಲೋಕೇಶ್‌ಗೌಡ, ರತ್ನವೇಲು, ಶಕ್ತಿವೇಲು, ಕನಕಮ್ಮ ಮತ್ತಿತರರು ಹಾಜರಿದ್ದರು.