ಜಿಲ್ಲೆ

ಡಿಸಿ ಸಮುದಾಯದವರೆಂದು ಭ್ರಷ್ಟರ ರಕ್ಷಣೆ

ಕಲಬುರಗಿ: ನಗರದ ಬಡೇಪುರದ ಸರ್ವೇ ೧೨ರಲ್ಲಿನ ವಕ್ಫ್ ಬೋರ್ಡ್ನ ೮ ಎಕರೆ ೩೪ ಗುಂಟೆ ಜಮೀನು ಅಕ್ರಮವಾಗಿ ವರ್ಗಾವಣೆ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಸುನೀಲ ಇಂಗನಕಲ್ ಆಗ್ರಹಿಸಿದರು.
ಬಡೇಪುರದ ಗ್ರಾಮ ಲೆಕ್ಕಾಧಿಕಾರಿ ಆಗಿದ್ದ ನಿಸಾರ ಅಹ್ಮದ್ ವಜೀರ್ ಅವರು ವಕ್ಫ್ ಬೋರ್ಡ್ ಜಮೀನನ್ನು ಅಕ್ರಮವಾಗಿ ಸಿಟಿಎಸ್ ಆಧಾರದಲ್ಲಿ ನಿವೇಶನಗಳನ್ನು ಹಾಕಿ ಮಾರಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಕ್ರಮದ ಕುರಿತು ವಿಚಾರಣಾಧಿಕಾರಿಗಳು ತನಿಖೆ ನಡೆಸಿ, ವರದಿ ಸಲ್ಲಿಸಿ ಕ್ರಿಮಿನಲ್ ಕೇಸ್ ದಾಖಲಿಸಲು ತಿಳಿಸಿರುತ್ತಾರೆ. ಆದರೆ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾ ವಕ್ಫ್ ಅಧಿಕಾರಿಗಳು ಕಡತವನ್ನು ಮುಚ್ಚಿಟ್ಟು ನಿಸಾರ್ ಅಹ್ಮದ್ ವಜೀರ್ ಅವರನ್ನು ತಮ್ಮ ಸಮುದಾಯದವರು ಎಂಬ ಕಾರಣಕ್ಕೆ ರಕ್ಷಣೆ ಮಾಡುತ್ತಿದ್ದಾರೆ ಎಂದರು.
ಕಮಲಾಪುರ ಉಪ ತಹಸೀಲ್ದಾರ್ ಇದ್ದಾಗ ಸರ್ಕಾರಿ ಹಣ ೧.೪೧ ಲಕ್ಷ ರೂ. ಸ್ವಂತಕ್ಕೆ ಬಳಸಿದ್ದರು. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲ. ಜಾತಿ ಪ್ರಮಾಣ ಪತ್ರದಲ್ಲಿ ಕಬ್ಬಲಿಗ ಅಂತಾ ಇದ್ದರೂ, ತಳವಾರ ಎಂದು ಎಸ್‌ಟಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದರು.
ಕಲಬುರಗಿಯ ತಹಸೀಲ್ ಕಚೇರಿಯ ಸಿಬ್ಬಂದಿ ಹುಸೇನ್ ಪಾಷಾ ಕಚೇರಿ ಆವರಣದಲ್ಲಿ ೧೦ರಿಂದ ೧೫ ಬೃಹತ್ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಕಡಿದು ಮಾರಾಟ ಮಾಡಿ, ಅದರ ಒಂದು ಲಕ್ಷ ರೂ. ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಅಲ್ಲದೆ ಜೇವರ್ಗಿಯಲ್ಲಿ ಇದ್ದಾಗ ಎಪಿಎಲ್ ಬದಲಾಗಿ ಬಿಪಿಎಲ್ ಕಾರ್ಡ್ ವಿತರಿಸಿ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಇಬ್ಬರ ವಿರುದ್ಧ ಕ್ರಿಮಿನಲ್ ಮೊಕ್ಕದಮ್ಮೆ ದಾಖಲಿಸಿ, ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಶಂಕರರಾವ ಕಿಲ್ಲೇದಾರ್, ಮಲಾರಿ ಶೆಳ್ಳಗಿ, ತಿಪ್ಪಣ್ಣ ಕಿನ್ನೂರ, ನಾಗೇಶ ಬೆಲಸೂರೆ, ಜೀವನ ಗುಂಡಗುರ್ತಿ ಇದ್ದರು.