ಮೈಸೂರು: ವರ್ಗಾವಣೆ ಆದೇಶ ಪ್ರಶ್ನಿಸಿ ಕೇಂದ್ರ ಆಡಳಿತ ಮಂಡಳಿಯ (ಸಿಎಟಿ) ಮೊರೆ ಹೋಗಿರುವ ಐಎಎಸ್ ಅಧಿಕಾರಿ ಬಿ.ಶರತ್ ಅವರಿಗೆ ಮತ್ತೆ ಹಿನ್ನೆಡೆಯಾಗಿದ್ದು, ವಿಚಾರಣೆಯನ್ನು ಮತ್ತೆ ನವೆಂಬರ್ 3ಕ್ಕೆ ಮುಂದೂಡಲಾಗಿದೆ.
ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರನ್ನು 29 ದಿನಗಳಲ್ಲೇ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಕ್ರಮ ಪ್ರಶ್ನಿಸಿ ಬಿ.ಶರತ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಡ್ವೊಕೇಟ್ ಜನರಲ್ ಅವರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದಕ್ಕೆ ಹೋಗಿದೆ. ಈವರೆಗೆ ನಾಲ್ಕು ಬಾರಿ ವಿಚಾರಣೆಯನ್ನು ಮುಂದೂಡಿದಂತಾಗಿದೆ.
ಸಿಂಧೂರಿಗೆ ನಿರಾಳ: ಈಗಾಗಲೇ ದಸರಾ ಉದ್ಘಾಟನೆಯಲ್ಲೂ ಪಾಲ್ಗೊಂಡಿರುವ ಹಾಲಿ ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಮತ್ತು ಇತರ ಗಣ್ಯರ ಜತೆಗೂಡಿ ಪುಷ್ಪಾರ್ಚನೆ ಮಾಡುವ ಅವಕಾಶ ಲಭಿಸಿದೆ.