ಜಿಲ್ಲೆ

ಡಿಸಿ ನಡೆಯಲ್ಲಿ 2071 ಅರ್ಜಿ ವಿಲೇ, ಜೋಡಿತಿಮ್ಮಸಂದ್ರದಲ್ಲಿ ಜಿಲ್ಲಾಡಳಿತ ಬಿಡಾರ, ಜಿಲ್ಲಾಧಿಕಾರಿಗೆ ಎಲ್ಲ ಇಲಾಖೆ ಅಧಿಕಾರಿಗಳ ಸಾಥ್

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶನಿವಾರ ದೊಡ್ಡಬಳ್ಳಾಪುರ ತಾಲೂಕು ಜೋಡಿ ತಿಮ್ಮಸಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2071 ಅರ್ಜಿಗಳು ಸ್ಥಳದಲ್ಲೇ ವಿಲೇವಾರಿಯಾಗುವ ಮೂಲಕ ದೊಡ್ಡಮಟ್ಟದ ಯಶಸ್ವಿಗೆ ಕಾರಣವಾಯಿತು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೇತೃತ್ವದಲ್ಲಿ ಇಡೀ ಜಿಲ್ಲಾಡಳಿತವೇ ಗ್ರಾಮದಲ್ಲಿ ಬೀಡುಬಿಟ್ಟು ಜನರ ಕುಂದು ಕೊರತೆ ಆಲಿಸಿದ್ದಲ್ಲದೆ ಸ್ಥಳದಲ್ಲೇ ಸಾವಿರಾರು ಸಮಸ್ಯೆಗಳಿಗೆ ಪರಹಾರ ಕಲ್ಪಿಸುವ ಮೂಲಕ ಸರ್ಕಾರದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿತು. ದಾಖಲೆಗಳಿಗಾಗಿ ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಿದ್ದ ಜನ ಮನೆಬಾಗಿಲಿಗೆ ದಾಖಲೆ ತಂದುಕೊಟ್ಟ ಅಧಿಕಾರಿಗಳಿಗೆ ವಂದನೆ ಸಲ್ಲಿಸಿ ಶುಭಕೋರಿದ ದೃಶ್ಯ ಕಂಡುಬಂತು.

ಸ್ಥಳದಲ್ಲೇ ಸವಲತ್ತು ಪಡೆದ ಧನ್ಯತೆ: ಅನೇಕ ತಿಂಗಳಿಂದ ಲಾನುಭವಿಗಳಿಗೆ ತಲುಪಬೇಕಿದ್ದ ಸೌಲಭ್ಯಗಳನ್ನು ಸ್ಥಳದಲ್ಲೇ ದೊರಕಿಸಿಕೊಟ್ಟ ಕಾರ್ಯಕ್ರಮಕ್ಕೆ ಜನರು ಹರ್ಷ ವ್ಯಕ್ತಪಡಿಸಿದರು. ಗ್ರಾಮವಾಸ್ತವ್ಯಕ್ಕೆ ತಿಮ್ಮಸಂದ್ರ ಗ್ರಾಮ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆ ವಾರದಿಂದಲೇ ಗ್ರಾಮದಲ್ಲಿ ಸಂಚಲನ ಉಂಟಾಗಿತ್ತು. ಶನಿವಾರ ತಳಿರುತೋರಣಗಳಿಂದ ಇಡೀ ಗ್ರಾಮ ಸಿಂಗಾರಗೊಂಡಿತ್ತು, ವಿವಿಧ ಕಲಾತಂಡಗಳ ಪ್ರದರ್ಶನದ ಜತೆಗೆ ಮಹಿಳೆಯರು ಆರತಿ ಬೆಳಗಿ ಗ್ರಾಮಕ್ಕೆ ಅಧಿಕಾರಿಗಳನ್ನು ಬರಮಾಡಿಕೊಂಡರು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಧಿಕಾರಿಗಳ ದರ್ಶನವೇ ದುಬಾರಿ ಎಂಬ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳ ತಂಡ ಕಂಡು ಗ್ರಾಮದ ಜನರು ಹಿಗ್ಗಿದರು. ಸಚಿವರು, ಶಾಸಕರು ಸೇರಿ ವಿವಿಧ ಜನಪ್ರತಿನಿಧಿಗಳು ಕಾಲ್ನಡಿಗೆ ಮೂಲಕ ಮನೆಮನೆಗೆ ಭೇಟಿ ನೀಡಿ ಕುಂದುಕೊರತೆ ವಿಚಾರಿಸಿದ್ದು ಜನರಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲಿನ ವಿಶ್ವಾಸ ಹೆಚ್ಚಿಸಿತು.

ವಿನಾಕಾರಣ ವಿಳಂಬ ಮಾಡಿದರೆ ಕ್ರಮ: ಉದ್ದೇಶ ಪೂರ್ವಕವಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ವಿಳಂಬ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತ್ತುವಾರಿ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ರವಾನಿಸಿದರು.

ಕಂದಾಯ ಇಲಾಖೆ ಎಲ್ಲ ಇಲಾಖೆಗಳಿಗೂ ಪ್ರಧಾನವಾಗಿದ್ದು, ಇಲ್ಲೇ ಭ್ರಷ್ಟಾಚಾರ ಹೆಚ್ಚುತ್ತಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇಂಥ ಪರಿಸ್ಥಿತಿ ಕಂಡುಬಂದರೆ ಅಂಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಎತ್ತಿನಹೊಳೆಗೆ ಚುರುಕು: ಈಗಾಗಲೇ ಶೇ.70 ಭಾಗ ಎತ್ತಿನಹೊಳೆ ಯೋಜನೆ ಮುಗಿದಿದ್ದು, ಕೋವಿಡ್ ಸಂಕಷ್ಟದಲ್ಲೂ 3 ಸಾವಿರ ಕೋಟಿ ರೂ.ನೀರಾವರಿ ಯೋಜನೆಗೆ ಮೀಸಲಿಡಲಾಗಿದೆ. ಈ ಮೂಲಕ ಅತಿ ಶೀಘ್ರದಲ್ಲೇ ಎತ್ತಿನಹೊಳೆ ಯೋಜನೆ ಮುಗಿಯಲಿದ್ದು, ದೊಡ್ಡಬಳ್ಳಾಪುರದ ಎಲ್ಲ ಕೆರೆಗಳಿಗೂ ನೀರು ಹರಿಯಲಿದೆ ಎಂದು ಸುಧಾಕರ್ ತಿಳಿಸಿದರು.

ಕಪರಟಗೆರೆಯ ಬೈರಗೊಂಡ್ಲು ಎತ್ತಿನಹೊಳೆ ಬಫರ್ ಡ್ಯಾಂ ನಿರ್ಮಾಣಕ್ಕಾಗಿ 11 ಹಳ್ಳಿ ಮತ್ತು ತಾಲೂಕಿನ 19 ಹಳ್ಳಿಗಳ ಪೈಕಿ 2534 ಎಕರೆ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ನೀಡಿ ಕಾಮಗಾರಿ ಆರಂಭಿಸಲಾಗುವುದು ಎಂದರು.

ದೊಡ್ಡಬಳ್ಳಾಪುರಕ್ಕೆ ವೃಷಭಾವತಿ: ದೊಡ್ಡಬಳ್ಳಾಪುರಕ್ಕೆ ವೃಷಭಾವತಿ ನೀರು ಬಿಡುವ ಅವಕಾಶದ ಕುರಿತು ಇಲ್ಲಿವರೆಗೂ ತಿಳಿದಿರಲಿಲ್ಲ. ಶಾಸಕ ಟಿ.ವೆಂಕಟರಮಣಯ್ಯ ಮನವಿಯಂತೆ ಸಿಎಂ ಬಳಿ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದು ಸುಧಾಕರ್ ತಿಳಿಸಿದರು.

ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ಮೆಡಿಕಲ್ ಕಾಲೇಜುಗಳಿವೆ, ಆದ್ದರಿಂದ ದೊಡ್ಡಬಳ್ಳಾಪುರಕ್ಕೆ ಜಿಲ್ಲಾಸ್ಪತ್ರೆ ನೀಡಲು ಶ್ರಮಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ತಡವಾಗಿ ಬಂದ ಸಚಿವ: ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಶಾಸಕರನ್ನು ಎತ್ತಿನ ಗಾಡಿಯಲ್ಲಿ ಮೆರವಣೆಗೆ ಮೂಲಕ ಗ್ರಾಮಕ್ಕೆ ಕರೆತರಲಾಯಿತು. ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಹಲವು ಮನೆಗಳಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಲಾಯಿತು. ಸಚಿವ ಸುಧಾಕರ್ ತಡವಾಗಿ ಬಂದು ಕಾರ್ಯಕ್ರಮಕ್ಕೆ ಸೇರಿಕೊಂಡರು. ಸ್ತ್ರೀ ಶಕ್ತಿ ಸಂಘಗಳಿಂದ ಸ್ಥಾಪಿಸಲಾಗಿದ್ದ ಸ್ಟಾಲ್‌ಗಳನ್ನು ಉದ್ಘಾಟಿಸಿದರು.

ಮೋದಿ ಸಾಧನೆಯ ಗುಣಗಾನ: ಆಯುಷ್ಮಾನ್ ಯೋಜನೆ ಮೂಲಕ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ನೀಡಲಾಗಿದೆ. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಯಾವುದೇ ಆರೋಗ್ಯ ಸೇವೆ ಪಡೆದರೂ, ಸರ್ಕಾರವೇ ಬಿಲ್ ಪಾವತಿಸಲಿದೆ, ಇದು ಉಚಿತ ಆರೋಗ್ಯ ಸೇವೆಯಾಗಿದ್ದು, ಒಮ್ಮೆ ಕಾರ್ಡ್ ಮಾಡಿಸಿಕೊಂಡರೆ ಜೀವನಪೂರ್ತಿ ಇರಲಿದೆ. ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲೂ ಉಚಿತ ಆರೋಗ್ಯ ವಿಮೆ ಇಲ್ಲ. ಆದರೆ ಮೋದಿಯವರು ಇಂಥ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.

ರೈತರಿಗೆ ನೆರವು: ರೈತರ ಮಕ್ಕಳಿಕೆ ಸರ್ಕಾರ ವಿದ್ಯಾರ್ಥಿವೇತನ ನೀಡುತ್ತಿದೆ. ಇದಕ್ಕಾಗಿ 1 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಹಿಂದೆ ಇದು ಪಿಯುಸಿ ಮತ್ತು ಉನ್ನತ ಶಿಕ್ಷಣಕ್ಕೆ ಮಾತ್ರ ಮೀಸಲಾಗಿತ್ತು. ಈಗ ಇದನ್ನು 8, 9, 10ನೇ ತರಗತಿಗಳಿಗೂ ವಿಸ್ತರಿಸಲಾಗಿದೆ. ಆಡಳಿತ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಸಚಿವರು ಪುನರುಚ್ಚರಿಸಿದರು.