ತ್ಯಾಮಗೊಂಡ್ಲು: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಿಂದಾಗಿ ಸಾರ್ವಜನಿಕರ ಅನೇಕ ಸಮಸ್ಯೆಗಳು ಬಗೆಹರಿಯುತ್ತಿವೆ. ಇದು ಸರ್ಕಾರದ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.
ಹೋಬಳಿಯ ಹಸಿರುವಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಉದ್ದೇಶ ಈಡೇರಲು ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಈ ಕಾರ್ಯಕ್ರಮದಿಂದ ಗ್ರಾಮಗಳ ಮೂಲ ಸೌಕರ್ಯಗಳ ಕೊರತೆ ಬಗ್ಗೆ ತಿಳಿಯುತ್ತದೆ. ಪ್ರತಿಯೊಂದು ಗ್ರಾಪಂಗೂ ಆಟದ ಮೈದಾನ ಇರುವಂತೆ ಯೋಜನೆ ರೂಪಿಸಬೇಕು. ಮುಖ್ಯವಾಗಿ ರೈತರು ಎದುರಿಸುತ್ತಿರುವ ಪೋಡಿ ಸಮಸ್ಯೆ ಎಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಮಗಳಿಗೆ ಸ್ಮಶಾನದ ವ್ಯವಸ್ಥೆ ಮಾಡಡಬೇಕೆಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಪಿಂಚಣಿ, ಆಧಾರ್, ಪಹಣಿ, ಸ್ಮಶಾನಕ್ಕೆ ಭೂಮಿ ಮಂಜೂರು, ಪಡಿತರ ಚೀಟಿ ಸಮಸ್ಯೆಗೆ ಮೊದಲ ಆದ್ಯತೆ ನೀಡಲಾಗಿದೆ. ಸಮಸ್ಯೆ ಬಗ್ಗೆ ಜನರು ಅರ್ಜಿ ಸಲ್ಲಿಸಿ ಸ್ಥಳದಲ್ಲೇ ಪರಿಹಾರ ಪಡೆಯಬಹುದು. ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸ ಸರಿಪಡಿಸುವ ಬಗ್ಗೆ ಆದೇಶ ಹೊರಡಿಸಲಾಗುವುದು. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರನ್ನು ಗುರುತಿಸಿ ಪೌತಿ ಖಾತೆ ಬದಲಾವಣೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಒಟ್ಟು 113 ಪೌತಿ ಖಾತೆ, 193 ಮಂದಿಗೆ ಸಾಮಾಜಿಕ ಭದ್ರತೆ ಪಿಂಚಣಿ, 4080 ಆಯುಷ್ಮಾನ್ ಕಾರ್ಡ್, ಕೃಷಿ ಇಲಾಖೆಯಿಂದ 6 ಫಲಾನುಭವಿಗಳಿಗೆ ತುಂತುರು ನೀರಾವರಿ ಉಪಕರಣ, ಸಮಾಜ ಕಲ್ಯಾಣ ಇಲಾಖೆಯಿಂದ 15 ಜನಕ್ಕೆ ಅಂತರ್ಜಾತಿ ವಿವಾಹದ ಪ್ರಮಾಣಪತ್ರ, 20 ಜನಕ್ಕೆ ಮತದಾರರ ಗುರುತಿನ ಚೀಟಿ, 05 ಭಾಗ್ಯಲಕ್ಷ್ಮೀ ಬಾಂಡ್, ಅಮೃತ್ ಸಹಾಯ ಕಿರು ಉದ್ಯಮ ಯೋಜನೆಯಡಿ 5 ಸ್ತ್ರೀ ಶಕ್ತಿ ಸಂಘಗಳಿಗೆ ಸಹಾಯಧನ, ತೋಟಗಾರಿಕೆ ಇಲಾಖೆಯಿಂದ 5 ಜನಕ್ಕೆ, 36 ಕುಟುಂಬಗಳಿಗೆ ಹೊಸ ಪಡಿತರ ಚೀಟಿ ವಿತರಿಸಿರುವುದಾಗಿ ಮಾಹಿತಿ ನೀಡಿದರು.
ಜಿಪಂ ಸಿಇಒ ರೇವಣಪ್ಪ, ಎಸಿ ತೇಜಸ್, ಡಿಎಚ್‌ಒ ಡಾ.ತಿಪ್ಪೇಸ್ವಾಮಿ, ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ, ಇಒ ಎಲ್.ಮೋಹನ್‌ಕುಮಾರ್, ಬಿಇಒ ರಮೇಶ್, ಉಪ ತಹಸೀಲ್ದಾರ್ ನಾರಾಯಣಸ್ವಾಮಿ, ಆರ್‌ಆರ್‌ಟಿ ಶಿರಸ್ತೇದಾರ್ ಶ್ರೀನಿವಾಸಮೂರ್ತಿ, ಆರ್‌ಐ ಮಹೇಶ್‌ಕುಮಾರ್, ರವಿಕುಮಾರ್, ಕುಮಾರಸ್ವಾಮಿ, ಗ್ರಾಪಂ ಅಧ್ಯಕ್ಷ ಚನ್ನಕೃಷ್ಣ, ಉಪಾಧ್ಯಕ್ಷೆ ಸಿದ್ದಮ್ಮ, ಗ್ರಾಪಂ ಸದಸ್ಯರಾದ ಅನಂತರಾಜು, ಜಿ.ಗಂಗರಾಜು, ತಿಮ್ಮೇಗೌಡ, ಸಿ.ರಾಜಣ್ಣ, ಗೌರಮ್ಮ, ಪಿಡಿಒ ರೇವತಿ, ಮುಖಂಡ ಹಸಿರುವಳ್ಳಿ ಕುಮಾರಣ್ಣ, ಗ್ರಾಪಂ ಮಾಜಿ ಸದಸ್ಯ ಡಿ.ನರಸಿಂಹಮೂರ್ತಿ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿ ಮೂರ್ತಿ ಇತರರು ಇದ್ದರು.
ನಿವೇಶನ ಗೊಂದಲಕ್ಕೆ ಪರಿಹಾರ: ಸಭಿಕರ ಜತೆ ಕುಳಿತಿದ್ದ ದಲಿತರ ಪರ ಹೋರಾಟಗಾರ್ತಿ ಸುನಂದಾ ಕೆ. ಮೂರ್ತಿ ಅವರ ಬಳಿಗೆ ಸ್ವತಃ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ತೆರಳಿ ಲಕ್ಕಪ್ಪನಹಳ್ಳಿಯ ಜನತಾ ನಿವೇಶನ ಗೊಂದಲದ ಬಗ್ಗೆ ಚರ್ಚೆ ನಡೆಸಿದರು. ತಹಸೀಲ್ದಾರ್ ಮಂಜುನಾಥ್ ಮತ್ತು ಇಒ ಮೋಹನ್ ಕುಮಾರ್ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಡಿಜಿಟಲ್ ಗ್ರಂಥಾಲಯ: ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ನಿರ್ಮಿಸಿದ್ದ ಡಿಜಿಟಲ್ ಗ್ರಂಥಾಲಯವನ್ನು ಜಿಲ್ಲಾಧಿಕಾರಿ ಮತ್ತು ಶಾಸಕರು ಉದ್ಘಾಟಿಸಿದರು.
ಅದ್ದೂರಿ ಸ್ವಾಗತ: ಮಹಿಳೆಯರು ಕಳಶ ಹೊತ್ತು, ವೀರಗಾಸೆ, ಪೂಜಾ ಕುಣಿತ, ತಮಟೆವಾದ್ಯ ಮತ್ತು ಮಂಗಳವಾದ್ಯಗಳೊಂದಿಗೆ ವಿಶೇಷವಾಗಿ ಅಲಂಕರಿಸಿದ್ದ ಎತ್ತಿನಗಾಡಿಯಲ್ಲಿ ಜಿಲ್ಲಾಧಿಕಾರಿ ಮತ್ತು ಶಾಸಕರನ್ನು ವೇದಿಕೆಗೆ ಕರೆತರಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರೌಢಶಾಲಾ ಮಕ್ಕಳಿಗೆ ಕಬಡ್ಡಿ ಪಂದ್ಯ ಆಯೋಜಿಸಲಾಗಿತ್ತು, ಪ್ರಥಮ ಸ್ಥಾನವನ್ನು ತ್ಯಾಮಗೊಂಡ್ಲು ಕರ್ನಾಟಕ ಪಬ್ಲಿಕ್ ಶಾಲೆ, ದ್ವಿತೀಯ ಸ್ಥಾನವನ್ನು ಭೈರನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಪಡೆಯಿತು.
ಸಿಂಚನಾ ಕಲಾ ತಂಡದ ಸಿದ್ದಯ್ಯ ಮತ್ತು ತಂಡದವರು ನಾಡಗೀತೆ, ರೈತಗೀತೆ ಹಾಗು ಜಾನಪದ ಸಂಗೀತ ಪ್ರಸ್ತುತಪಡಿಸಿದರು.
ವಿವಿಧ ಇಲಾಖೆಯ ಮಳಿಗೆ: ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಂಜೀವಿನಿ ಸ್ವ ಸಹಾಯ ಸಂಘ, ಆರೋಗ್ಯ ಇಲಾಖೆ, ತೋಟಗಾರಿಖಾ ಇಲಾಖೆ, ಅರಣ್ಯ ಇಲಾಖೆ, ಆಯುಷ್, ರೋಟರಿ ಸಂಸ್ಥೆ ನೆಲಮಂಗಲ, ಕಂದಾಯ ಇಲಾಖೆ ಹಾಗು ತಾಪಂನಿಂದ ಮಳಿಗೆ ನಿರ್ಮಿಸಿ ಆಯಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.