ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಬೀರಸಂದ್ರದಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ಕೋತಿಗಳ ಕಾಟ ಮಿತಿಮೀರಿದೆ. ವಾನರ ಪಡೆಯ ಕುಚೇಷ್ಟೆಗೆ ಡಿಸಿ ಕಚೇರಿ ಸಿಬ್ಬಂದಿ ಹೈರಾಣಾಗಿದ್ದಾರೆ. ನೂರಾರು ಕೋತಿಗಳ ಪಟಾಲಮ್ಮು ಶಕ್ತಿ ಕೇಂದ್ರಕ್ಕೆ ಮುತ್ತಿಗೆ ಹಾಕುತ್ತಿದ್ದು, ಇಲ್ಲಿಗೆ ಬರುವ ಸಾರ್ವಜನಿಕರ ಮೇಲೂ ಎರಗಿ ಆತಂಕದ ವಾತಾವರಣ ಸೃಷ್ಟಿಸುತ್ತಿವೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ 38 ಇಲಾಖೆಗಳಿದ್ದು, ಪ್ರತಿದಿನ ವಾನರ ಪಡೆ ಎಲ್ಲ ಇಲಾಖೆಗಳಿಗೂ ಭೇಟಿ ನೀಡಿ ತಲಾಶ್ ನಡೆಸುತ್ತವೆ, ಸಿಬ್ಬಂದಿ ಇಟ್ಟಿರುವ ಊಟದ ಡಬ್ಬಿ ಕಂಡರೇ ಕ್ಷಣಾರ್ಧದಲ್ಲಿ ಅಪಹರಿಸಿ ಎಲ್ಲೆಂದರಲ್ಲಿ ಎಸೆಯುತ್ತಿವೆ. ಒಂದು ವೇಳೆ ಖಾಲಿ ಡಬ್ಬಿಯಾದರೆ ಕೋಪದಿಂದ ಸಿಬ್ಬಂದಿ ಎದುರೇ ಬಿಸಾಡಿ ಹೋಗುತ್ತಿವೆ. ಡಬ್ಬಿಯನ್ನು ಹುಡುಕಿಕೊಂಡು ಹೋಗುವುದೇ ಸಿಬ್ಬಂದಿಯ ದಿನನಿತ್ಯದ ಕೆಲಸವಾಗಿದೆ, ಕೋತಿಗಳನ್ನು ಓಡಿಸಲು ಮುಂದಾದರೆ ಸಿಬ್ಬಂದಿ ವಿರುದ್ಧವೇ ತಿರುಗಿ ಬೀಳುತ್ತವೆ. ಇದರಿಂದ ಹೈರಾಣಾಗಿರುವ ಸಿಬ್ಬಂದಿ ಕೋತಿಗಳ ಪ್ರತಿರೋಧ ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಪೂಜಾ ದಿನ ಹಬ್ಬ: ಸಾಮಾನ್ಯವಾಗಿ ಶುಕ್ರವಾರ ಎಲ್ಲ ಇಲಾಖೆ ಕಚೇರಿಗಳಲ್ಲೂ ಕಚೇರಿ ಪೂಜೆ ಇಟ್ಟುಕೊಳ್ಳುವುದು ಸಂಪ್ರದಾಯ, ಅಂದು ಬಾಳೆಹಣ್ಣು, ಕಾಯಿಗಳನ್ನು ಪೂಜೆಗೆ ಇಡುವುದನ್ನು ಮನಗಂಡಿರುವ ಕೋತಿಗಳು ಅಂದು ಇಡೀ ಜಿಲ್ಲಾಡಳಿತ ಭವನದಲ್ಲಿ ರೌಂಡಿಂಗ್ ಶುರುವಿಟ್ಟುಕೊಳ್ಳುತ್ತವೆ, ಇನ್ನು ಜಯಂತಿಗಳಂದು ಕೋತಿಗಳ ಪಡೆ ಎಲ್ಲೆಂದರಲ್ಲಿ ದಾಳಿ ನಡೆಸಿ ಹಣ್ಣುಕಾಯಿಗಳಿಗೆ ಮುಗಿಬೀಳುತ್ತವೆ. ಈ ವೇಳೆ ಹಣ್ಣುಕಾಯಿಗಳಿಗಾಗಿ ಕೋತಿಗಳ ನಡುವೆಯೇ ಏರ್ಪಡುವ ಕದನಕ್ಕೆ ಜನರು ಹೆದರುವಂತಾಗಿದೆ.
ಡಸ್ಟ್ ಬಿನ್‌ಗಳು ಚೆಲ್ಲಾಪಿಲ್ಲಿ: ಅಲ್ಲಲ್ಲಿ ಒಣ ಹಾಗೂ ಹಸಿ ಕಸ ವಿಲೇವಾರಿಗೆ ಪ್ರತ್ಯೇಕ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಪ್ರತಿನಿತ್ಯ ಕೋತಿಗಳು ಡಸ್ಟ್‌ಬಿನ್‌ಗಳನ್ನು ಉರುಳಿಸಿ ಅಲ್ಲಿ ಆಹಾರದ ತಡಕಾಟ ನಡೆಸುತ್ತವೆ, ಇದರಿಂದ ಹಸಿ ಹಾಗೂ ಒಣ ಕಸ ಜಿಲ್ಲಾಡಳಿತ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿ ಹರಡುತ್ತಿದೆ. ಇವುಗಳ ಸ್ವಚ್ಛತೆ ಮಾಡುವಲ್ಲೇ ಸ್ವಚ್ಛತಾ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ೈಲ್‌ಗಳ ಮೇಲೂ ದಾಳಿ: ಸಿಬ್ಬಂದಿ ಹಾಗೂ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ೈಲ್‌ಗಳನ್ನು ಹಿಡಿದು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಓಡಾಡುವಾಗ ಮೇಲೆರಗುವ ಕೋತಿಗಳು ಅವುಗಳನ್ನು ಕಿತ್ತುಕೊಳ್ಳಲು ಮುಂದಾಗುವುದರಿಂದ ಕಡತಗಳನ್ನು ಹಿಡಿದು ಓಡಾಡುವುದೇ ದೊಡ್ಡ ಸವಾಲಾಗಿದೆ.
ವೈರ್‌ಗಳು ಕಟ್: ಇಂಟರ್‌ನೆಟ್, ವಿದ್ಯುತ್ ಲೈನ್, ಟೆಲಿಪೋನ್ ಲೈನ್ ಸೇರಿ ಇನ್ನಿತರ ವೈರ್‌ಗಳನ್ನು ಹಿಡಿದು ಜೋಲಿ ಹೊಡೆಯುವುದು, ಅವುಗಳನ್ನು ಕಿತ್ತು ಬಿಸಾಕುವುದು ಸಾಮಾನ್ಯ ಎನ್ನುವಂತಾಗಿದೆ. ಅವುಗಳ ರಿಪೇರಿ ಮಾಡುವುದು ನಿರ್ವಹಣಾ ವಿಭಾಗದ ಸಿಬ್ಬಂದಿಯ ಪ್ರತಿನಿತ್ಯದ ಕೆಲಸವಾಗಿದೆ.
ಹೊರವಲಯ ಕಾರಣ: ಕುಂದಾಣ ಹೋಬಳಿ ಬೀರಸಂದ್ರ ಹೊರವಲಯದಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಿದ್ದು, ಸುತ್ತಮುತ್ತ ಖಾಲಿ ಪ್ರದೇಶವಿದೆ, ಹೆಚ್ಚಿನ ಸಂಖ್ಯೆಯಲ್ಲಿ ನೀಲಗಿರಿ ತೋಪುಗಳಿವೆ, ಇನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಸಗಸೆ ಮರಗಳು ಹೊರತುಪಡಿಸಿ ಮಿಕ್ಕಂತೆ ಬರೀ ಶೋ ಮರಗಿಡಗಳಿವೆ, ಹಣ್ಣಿನ ಗಿಡಗಳಿಲ್ಲದೆ ಆಹಾರ ಅರಸಿಕೊಂಡು ಡಿಸಿ ಕಚೇರಿ ಒಳಾಂಗಣ ಪ್ರವೇಶಿಸುತ್ತಿವೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಈ ಭಾಗದಲ್ಲಿ ಹೋಟೆಲ್, ದೇವಸ್ಥಾನ ಮತ್ತಿತರ ಆಹಾರ ಸಿಗುವಂತ ಸ್ಥಳವಿಲ್ಲ, ಹಣ್ಣಿನ ಗಿಡಮರಗಳೂ ಇಲ್ಲ, ಆದ್ದರಿಂದ ಕೋತಿಗಳಿಗೆ ಆಹಾರ ಸಿಗುವುದೇ ದುಸ್ತರವಾಗಿದೆ, ಆಹಾರ ಹುಡುಕಿಕೊಂಡು ಬರುವ ಇವು ಅನಿವಾರ್ಯವಾಗಿ ಕಚೇರಿಗಳಿಗೆ ನುಗ್ಗಿ ಆಹಾರ ಡಬ್ಬಿಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತವೆ. ಡಿಸಿ ಆವರಣದಲ್ಲಿ ಬೇಕಾದಷ್ಟು ಜಾಗವಿದೆ. ಇಲ್ಲಿ ಹಣ್ಣಿನ ಗಿಡಗಳನ್ನು ನೆಡುವುದರಿಂದ ಅನುಕೂಲವಾಗಲಿದೆ. ಕೃಷ್ಣಪ್ಪ, ಕುಂದಾಣ ರೈತ ಊಟದ ಡಬ್ಬಿ, ಬ್ಯಾಗ್ ಮತ್ತಿತರ ವಸ್ತುಗಳನ್ನು ಹಿಡಿದುಕೊಂಡು ಓಡಾಡುವುದೇ ಕಷ್ಟವಾಗಿದೆ, ಯಾವಾಗ ಕೋತಿಗಳು ದಾಳಿ ನಡೆಸುತ್ತವೆ ಎಂದು ಹೇಳುವುದು ಕಷ್ಟ, ಕಿಟಿಕಿ ಬಾಗಿಲು ಮೂಲಕ ನೇರವಾಗಿ ನುಗ್ಗಿ ಏನು ಸಿಕ್ಕರೆ ಅದನ್ನು ಎತ್ತಿಕೊಂಡು ಓಡುತ್ತವೆ, ಸಿಬ್ಬಂದಿ ಮೇಲೆರಗಿರುವ ನಿದರ್ಶನಗಳೂ ಇವೆ. ಅವುಗಳು ಆಹಾರಕ್ಕಾಗಿ ಹೋರಾಡುತ್ತವೆ ಎಂದು ನಾವು ಮಾನವೀಯತೆ ದೃಷ್ಟಿಯಿಂದ ಸುಮ್ಮನಿದ್ದೇವೆ. ಕಮಲಮ್ಮ, ಡಿಸಿ ಕಚೇರಿ ಸಿಬ್ಬಂದಿ