ಜಿಲ್ಲೆ

ಡಿಸಿ ಕಚೇರಿ ಎದುರು ಮೀನು ಇಟ್ಟು ಶಾಂತಿಯುತ ಪ್ರತಿಭಟನೆ

ಹಾಸನ: ಹಲವು ವರ್ಷಗಳಿಂದಲೂ ಜಲಾಶಯ, ನದಿ, ಕೆರೆಯಲ್ಲಿ ಅಲ್ಪಸಲ್ಪ ಸಿಗುವ ಮೀನುಗಳನ್ನು ಹಿಡಿದು ಅವುಗಳನ್ನು ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಈಗ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಇದರಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಮೀನುಗಾರರು ಬುಧವಾರ ಡಿಸಿ ಕಚೇರಿ ಎದುರು ಮೀನು ಇಟ್ಟು ಶಾಂತಿಯುತ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ದಲಿತ ಮುಂಖಡ ಆರ್‌ಪಿಐ ಸತೀಶ್, ತಾಲೂಕಿನ ಹಾಲುವಾಗಿಲು ಬಳಿ ಹೊಳೆಯಲ್ಲಿ ಕೆಲ ಬಡ ಕುಟುಂಬಗಳು ಮೀನು ಹಿಡಿದು ಹಾಸನ ನಗರದ ವಿವಿಧ ಕಡೆ ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಮತ್ತು ನಗರಸಭೆಯವರು ಇವರಿಗೆ ವ್ಯಾಪಾರ ಮಾಡದಂತೆ ತಡೆಯೊಡ್ಡುತ್ತಿದ್ದಾರೆ. ಬಾಯಿಗೆ ಬಂದಂತೆ ಬೈದು ಮೀನುಗಳನ್ನು ಮಾರಾಟ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.

ಈ ವೇಳೆ ಕೆಲ ಮೀನುಗಾರರ ಮೇಲೆ ಹಲ್ಲೆ ಕೂಡ ಮಾಡಿ, ಪ್ರತಿನಿತ್ಯ ಕಿರುಕುಳ ಕೊಡಲಾಗುತ್ತಿದೆ ಎಂದು ಗಂಭೀರ ಆರೋಪಿಸಿದರು. ನಗರದ ಯಾವ ಕಡೆಯೂ ಇವರಿಗೆ ಮೀನು ಮಾರಾಟ ಮಾಡಲು ಅವಕಾಶ ಕೊಡುತ್ತಿಲ್ಲ. ಈಗ ಇವರ ಜೀವನ ನಡೆಸುವುದೇ ಕಷ್ಟಕರವಾಗಿರುವುದರಿಂದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಲಾಗುತ್ತಿದೆ. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಪರ ಸಂಘಟನೆಗಳಿಂದ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಮೀನು ಮಾರಾಟಗಾರ್ತಿ ನೇತ್ರಾವತಿ ಮಾತನಾಡಿ, ನಮ್ಮ ಜೀವನ ಸಾಗಿಸುವುದಕ್ಕಾಗಿ ಹೊಳೆಯಲ್ಲಿ ಸಿಗುವ ಸಲ್ಪ ಸಲ್ಪ ಮೀನುಗಳನ್ನು ಮಾರಾಟ ಮಾಡುತ್ತಿದ್ದೇವೆ. ಆದರೆ ನಮಗೆ ಹಾಸನ ನಗರದ ಯಾವ ಕಡೆಯೂ ವ್ಯಾಪಾರ ಮಾಡಲು ಅವಕಾಶ ಕೊಡುತ್ತಿಲ್ಲ. ಮೀನು ಮಾರಾಟ ಮಾಡುವಾಗ ಪೊಲೀಸರು ಬಂದು ಬೂಟು ಕಾಲಿನಿಂದ ಒದ್ದು ಹೋಗುತ್ತಾರೆ. ಇನ್ನು ನಗರಸಭೆಯವರು ಮೀನುಗಳನ್ನೆಲ್ಲಾ ರಸ್ತೆಗೆ ಎಸೆದು ಎಲ್ಲೂ ಮಾರಾಟ ಮಾಡಬೇಡಿ ಎನ್ನುತ್ತಾರೆ ಹೀಗಾದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಇಡೀ ಕುಟುಂಬ ನಿರ್ವಹಣೆ ಮಾಡುವುದು ಹೇಗೆ, ದಿನಕ್ಕೆ ಎರಡು ಗಂಟೆ ಮಾತ್ರ ಮೀನು ವ್ಯಾಪಾರ ಮಾಡುತ್ತೇವೆ. ನಂತರ ಇರುವುದಿಲ್ಲ. ನಾವೇನು ಎರಡು ಮೂರು ಕ್ವಿಂಟಾಲ್ ಮೀನು ಮಾರಾಟ ಮಾಡುವುದಿಲ್ಲ. ಕೇವಲ 2-3 ಕೆಜಿ ಮೀನು ಮಾರಾಟ ಮಾಡಿಕೊಂಡು ವಾಪಸ್ ಹೋಗುತ್ತೇವೆ. ಈ ಕಸುಬು ಬಿಟ್ಟರೆ ನಮಗೆ ಬೇರೆ ಜೀವನಾಧಾರ ಇಲ್ಲ. ಹಾಗಾಗಿ ನಾವು ಹಿಡಿದ ಮೀನನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಮರಿ ಜೋಸೆಫ್, ದೊರೆ ಇತರರು ಇದ್ದರು.