ಜಿಲ್ಲೆ

ಡಿಸಿ, ಎಸ್ಪಿ, ಸಿಇಒ ಜಿಲ್ಲೆಯ ತಳಪಾಯ : ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ರಾಕೇಶ್ ಕುಮಾರ್ ಅಭಿಮತ

ತುಮಕೂರು : ಜಿಲ್ಲೆಯಲ್ಲಿ ಎರಡೂವರೆ ವರ್ಷದ ನನ್ನ ಕೆಲಸ ಆತ್ಮತೃಪ್ತಿ ತಂದಿದೆ. ಡಿಸಿ, ಎಸ್ಪಿ, ಸಿಇಒ ಜಿಲ್ಲೆಯ ತಳಪಾಯವಿದ್ದಂತೆ. ಇದು ಗಟ್ಟಿಯಾಗಿದ್ದರೆ ಜಿಲ್ಲೆಯಲ್ಲಿ ಎಂತಹ ಕೆಲಸವನ್ನೂ ಮಾಡಬಹುದು. ಪರಸ್ಪರ ಸಮನ್ವಯತೆ ಇದ್ದಿದ್ದರಿಂದ ನನಗೆ ಇವತ್ತು ಮೆಚ್ಚುಗೆ ಸಿಕ್ಕಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸಂಜೆ ಜಿಲ್ಲಾಡಳಿತ ಹಾಗೂ ಜಿಪಂ ವತಿಯಿಂದ ನೀಡಿದ ಬೀಳ್ಕೋಡುಗೆ ಸ್ವೀಕರಿಸಿ ಮಾತನಾಡಿದ ಅವರು, ಉತ್ತಮ ಟೀಂ ವರ್ಕ್ ಇದ್ದಿದ್ದರಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದರು.

ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಪ್ರಾಸ್ತಾವಿಕ ಮಾತನಾಡಿ, ರಾಕೇಶ್ ಕುಮಾರ್ ಅವರು ಯಾವುದೇ ಹುದ್ದೆಗೆ ವರ್ಗಾವಣೆಗೊಂಡರೂ, ಉತ್ತಮವಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಅಂತಿಮ ವಿದಾಯದ ಕಾರ್ಯಕ್ರಮದ ನಿರ್ವಹಣೆ, ಲೋಕಸಭಾ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದ ಕಾರ್ಯವೈಖರಿಗೆ ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ ಎಂದರು.

ನೂತನ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಸ್ವಾಗತಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ಇದ್ದರು.

ಸಾಮಾನ್ಯ ಮನುಷ್ಯನ ಜೀವನದಲ್ಲಿ ಬದಲಾವಣೆ ತರುವ ಶಕ್ತಿ ಕಂದಾಯ ಇಲಾಖೆಗೆ ಇದೆ. ವೃದ್ಧರು, ಅಂಗವಿಕಲರಿಗೆ , ಹಿರಿಯ ನಾಗರಿಕರನ್ನು ಪಿಂಚಣಿಗಾಗಿ ಕಚೇರಿಗೆ ಅಧಿಕಾರಿಗಳು ಅಲೆಸಬೇಡಿ. ಅವರ ಸಮಸ್ಯೆಗೆ ಸ್ಪಂದಿಸಿ. ರೈತರನ್ನು ಓಡಾಡಿಸಬೇಡಿ. ಡಾ.ಕೆ.ರಾಕೇಶ್ ಕುಮಾರ್ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ