ಜಿಲ್ಲೆ

ಡಿಸಿ, ಎಸ್ಪಿ ನಗರ ಪ್ರದಕ್ಷಿಣೆ

ಗದಗ: ನಗರದ ಗ್ರೇನ್ ಮಾರುಕಟ್ಟೆ ಇಕ್ಕಟ್ಟಾಗಿದ್ದು ಜನರು ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಗ್ರೇನ್ ಮಾರ್ಕೆಟ್​ನಲ್ಲಿದ್ದ ತರಕಾರಿ ವ್ಯಾಪಾರವನ್ನು ನಗರದ ಕೆ.ಎಚ್. ಪಾಟೀಲ ವೃತ್ತದಿಂದ ಭೂಮರಡ್ಡಿ ವೃತ್ತದವರೆಗಿನ ಮಾರ್ಗಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಅಲ್ಲಿ ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ. ಮಾಸ್ಕ್ ಧರಿಸದೆ ಬರುವುದು, ಪರಸ್ಪರ ಅಂತರ ಕಾಪಾಡಿಕೊಳ್ಳದಿರುವುದು ಸಾಮಾನ್ಯವಾಗಿದೆ. ಹೀಗಾಗಿ, ಗುರುವಾರ ತರಕಾರಿ ಮಾರ್ಕೆಟ್​ಗೆ ಜಿಲ್ಲಾಧಿಕಾರಿ ಸುಂದರೇಶಬಾಬು, ಎಸ್ಪಿ ಯತೀಶ್, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಪೌರಾಯುಕ್ತ ರಮೇಶ ಜಾಧವ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಅವಳಿ ನಗರದ ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ಸರ್ಕಲ್ ಸೇರಿದಂತೆ ಬೆಟಗೇರಿಯ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕರೊನಾ ಸೋಂಕು ನಿಯಂತ್ರಣಕ್ಕೆ ಜಾರಿ ಮಾಡಲಾಗಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಆಗದಂತೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಸಬೇಕು. ಮಾಸ್ಕ್ ಧರಿಸದವರು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಸೂಲಿ ಮಾಡಬೇಕು ಹಾಗೂ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚನೆ ನೀಡಿದರು.

ಹಿರಿಯ ಅಧಿಕಾರಿಗಳ ಭೇಟಿ ಹಿನ್ನೆಲೆಯಲ್ಲಿ ತರಕಾರಿ ವ್ಯಾಪಾರ ಶಿಸ್ತುಬದ್ಧವಾಗಿ ನಡೆಯಿತು. ಮಾಸ್ಕ್ ಇಲ್ಲದವರು ಅಧಿಕಾರಿಗಳನ್ನು ಕಂಡು ವಾಪಸ್ ಆಗುತ್ತಿರುವುದು ಕಂಡುಬಂದಿತು. ಅವಳಿನಗರದಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದರು. ಪದೇ ಪದೆ ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ವಕೀಲರು ತರಕಾರಿ ಮಾರ್ಕೆಟ್​ನಲ್ಲಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವ ಕುರಿತು ಜಾಗೃತಿ ಮೂಡಿಸಿದರು.

ಬೆಳಗ್ಗೆ 10 ಗಂಟೆಯೊಳಗೆ ನ್ಯಾಯಬೆಲೆ ಅಂಗಡಿಯಲ್ಲಿ ಫಲಾನುಭವಿಗಳು ಪಡಿತರ ವಸ್ತುಗಳನ್ನು ಸರದಿ ಸಾಲಿನಲ್ಲಿ ನಿಂತು ಪಡೆದುಕೊಂಡು ಹೋದರು.

ಬುಧವಾರ ಜಿಲ್ಲೆಯಲ್ಲಿ 129 ಜನರಿಗೆ ಸೋಂಕು ತಗುಲಿದ್ದು, ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ವಲಸೆ ಹೋಗಿದ್ದ ಜಿಲ್ಲೆಯ ಜನರು ವಾಪಸ್ ಆಗಮಿಸುತ್ತಿರುವುದರಿಂದ ಮುಂದಿನ ವಾರದೊಳಗೆ ಪಾಸಿಟಿವ್ ಕೇಸ್ ಗಳು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಹೊರರಾಜ್ಯ, ಜಿಲ್ಲೆಗಳಿಂದ ಬರುವವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಪರೀಕ್ಷೆ ಮಾಡದಿರುವುದು ಜನರ ಆತಂಕ ಹೆಚ್ಚಿಸಿದೆ.

ಜನರಲ್ಲಿ ಹೆಚ್ಚಿದ ಜಾಗೃತಿ: ಕರೊನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಜನತಾ ಕರ್ಫ್ಯೂಗೆ ಗುರುವಾರವೂ ಗದಗ-ಬೆಟಗೇರಿ ಸೇರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರೊನಾ 2ನೇ ಅಲೆ ಜನರಲ್ಲಿ ಕೊಂಚ ಭಯ ಹುಟ್ಟಿಸಿದಂತೆ ಕಾಣಿಸುತ್ತಿದೆ. ಹೀಗಾಗಿ, ಯಾರೂ ಸಹ ಅನಗತ್ಯವಾಗಿ ಹೊರಗಡೆ ಸಂಚರಿಸುವ ಧೈರ್ಯ ಮಾಡುತ್ತಿಲ್ಲ. ಬೆಳಗ್ಗೆ 10 ಗಂಟೆಯೊಳಗೆ ಅಗತ್ಯ ಸಾಮಗ್ರಿ ಖರೀದಿಸಿ ಮನೆ ಸೇರಿದರೆ ಮುಗಿಯಿತು, ಮತ್ತೆ ಆಚೆ ಬರುತ್ತಿಲ್ಲ.

ಉಚಿತ ಆಟೋ ಸೇವೆಗೆ ವ್ಯಾಪಕ ಸ್ಪಂದನೆ: ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಸಲುವಾಗಿ ಜಿಲ್ಲಾ ಆಟೋ ಚಾಲಕರ, ಮಾಲೀಕರ ಸಂಘದ ವತಿಯಿಂದ ಆರಂಭಿಸಿರುವ ಉಚಿತ ಆಟೋ ಸಂಚಾರ ಸೇವೆಗೆ ವ್ಯಾಪಕ ಸ್ಪಂದನೆ ದೊರೆತಿದೆ. ಸಂಘದ ಜನಪರ ಕಾರ್ಯಕ್ಕೆ ಅವಳಿನಗರದ ಜನರು ಪ್ರಶಂಸೆ ವ್ಯಕಪಡಿಸಿದ್ದು, ಹಲವಾರು ಜನರು ಉಚಿತ ಆಟೋ ಸೇವೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಜನರ ಸೇವೆ ಮಾಡಿದ ಸಂತೃಪ್ತಿ ನಮಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.