ಜಿಲ್ಲೆ

ಡಿಸಿ, ಎಡಿಸಿಯೊಂದಿಗೆ ಮಕ್ಕಳ ಸಂಭ್ರಮ, ಎಡಿಸಿ ಪುತ್ರಿ ಜನ್ಮದಿನಾಚರಣೆ ಜತೆಗೆ ವಸತಿಶಾಲೆ ಮಕ್ಕಳ ಹುಟ್ಟುಹಬ್ಬ

ಬೆಂಗಳೂರು ಗ್ರಾಮಾಂತರ: ಇಸ್ತೂರಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮಕ್ಕಳು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್ ಹಾಗೂ ಮತ್ತಿತರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂಭ್ರಮಿಸಿದರು. ಕೇಕ್ ಕತ್ತರಿಸಿ ಅಧಿಕಾರಿಗಳಿಗೆ ತಿನ್ನಿಸಿ ಅವರ ಕೈಯಿಂದ ಮಕ್ಕಳು ಕೇಕ್ ಸವಿದು ಖುಷಿಪಟ್ಟರು. ಕಡೆಗೆ ಇಡೀ ವಸತಿ ಶಾಲೆ ಮಕ್ಕಳು ಅಧಿಕಾರಿಗಳೊಂದಿಗೆ ಸಾಮೂಹಿಕ ಭೋಜನ ಸವಿದು ಕುಣಿದು ಕುಪ್ಪಳಿಸಿದರು.

ಇಷ್ಟೆಲ್ಲ ಸಂಭ್ರಮಕ್ಕೆ ಕಾರಣವಾಗಿದ್ದು ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್ ಅವರ ಪುತ್ರಿ ದೇಸ್ಮಾ ಅವರ ಜನ್ಮದಿನಾಚರಣೆ. ಮಗಳ ಹುಟ್ಟುಹಬ್ಬವನ್ನು ವಸತಿಶಾಲೆ ಮಕ್ಕಳೊಂದಿಗೆ ಆಚರಿಸಬೇಕೆಂಬ ಇಂಗಿತಕ್ಕೆ ಜತೆಯಾದವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಮುಖ್ಯವಾಗಿ ಜಿಲ್ಲಾಧಿಕಾರಿಗಳು ಜತೆಗೂಡಿದ್ದು ವಿಶೇಷ.

ವಸತಿ ಶಾಲೆ ಇಬ್ಬರು ಮಕ್ಕಳಿಗೂ ಹುಟ್ಟುಹಬ್ಬ: ಇದೇ ವೇಳೆ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಹುಟ್ಟುಹಬ್ಬವೂ ಅದೇ ದಿನವಾಗಿದ್ದರಿಂದ ಪ್ರತ್ಯೇಕವಾಗಿ ಕೇಕ್ ತರಿಸಿ ಅವರಿಂದಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ಬಳಿಕ ಎಡಿಸಿ ಅವರಿಂದ ಶಾಲೆಯ ಎಲ್ಲ ಮಕ್ಕಳಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳು, ಮಕ್ಕಳು ಎಲ್ಲರೂ ಒಟ್ಟಿಗೆ ಕುಳಿತು ಊಟ ಸವಿದ ದೃಶ್ಯ ವಿಶೇಷ ಎನಿಸಿತ್ತು.

ನಗದು ಬಹುಮಾನ: ಎಸ್ಸೆಸ್ಸೆಲ್ಸಿಯಲ್ಲಿ 617 ಅಂಕಗಳಿಸಿದ ವಿದ್ಯಾರ್ಥಿನಿ ಕಲ್ಪನಾಗೆ 5 ಸಾವಿರ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.

ಜಿಲ್ಲೆಯಲ್ಲಿ ವಿಶೇಷ: ಸಾಮಾನ್ಯವಾಗಿ ಉನ್ನತ ಅಧಿಕಾರಿಗಳನ್ನು ಕಾಣುವುದೇ ಕಷ್ಟ ಎಂಬಂತ ಪರಿಸ್ಥಿತಿ ಇದೆ, ಇನ್ನು ದೊಡ್ಡ ಅಧಿಕಾರಿಗಳು ಮಕ್ಕಳ ಹುಟ್ಟುಹಬ್ಬದಂಥ ಕಾರ್ಯಕ್ರಮವನ್ನು ಖಾಸಗಿಯಾಗಿ ಅದ್ದೂರಿಯಾಗಿ ನೆರವೇರಿಸುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಉನ್ನತ ಅಧಿಕಾರಿಯೊಬ್ಬರು ಮಗಳ ಜನ್ಮದಿನವನ್ನು ವಸತಿ ಶಾಲೆ ಮಕ್ಕಳೊಂದಿಗೆ ಆಚರಿಸಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.