ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್‌ನಿಂದ ಲಾಭ ಪಡೆದ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಹಾಗೂ ಪ್ರಕರಣ ವಿಚಾರಣೆಗೆ ಹಾಜರಾಗಲು ಸೂಚಿಸಿ ಜಾರಿಗೊಳಿಸಿದ್ದ ಸಮನ್ಸ್ ರದ್ದು ಕೋರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಬಿ ರಿಫೋರ್ಟ್ ಸಲ್ಲಿಸಿದ್ದಾರೆ. ಅದನ್ನು ವಿಶೇಷ ನ್ಯಾಯಾಲಯ ಸಮ್ಮತಿಸಿಯೂ ಇಲ್ಲ ಹಾಗೂ ನಿರಾಕರಿಸಿಯೂ ಇಲ್ಲ. ಆದರೆ, ಖಾಸಗಿ ದೂರುದಾರರ ಹೇಳಿಕೆ ಆಧರಿಸಿ ಅರ್ಜಿದಾರರ ವಿರುದ್ಧ ಏಕಾಏಕಿ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸಿದೆ. ಅರ್ಜಿದಾರರ ವಿರುದ್ಧ ಯಾವುದೇ ಗುರುತರ ಆರೋಪವಿಲ್ಲದ ಕಾರಣ ಸಮನ್ಸ್ ಹಾಗೂ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕೆಂದು ಸಿದ್ದರಾಮಯ್ಯ ಪರ ವಕೀಲರು ವಾದ ಮಂಡಿಸಿದ್ದರು.
ಪ್ರಕರಣವೇನು?: ಮೈಸೂರಿನ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಸ್ವಾಧೀನಪಡಿಸಿಕೊಂಡಿದ್ದ 535 ಎಕರೆ ಜಮೀನಿನಲ್ಲಿ 30 ಗುಂಟೆ ಜಮೀನು ಡಿನೋಟಿಫೈ ಮಾಡಲಾದ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿತ್ತು.
ಡಿನೋಟಿಫೈ ಮಾಡಲಾದ 30 ಗುಂಟೆ ಜಮೀನು ಪೈಕಿ 10 ಗುಂಟೆ ಖರೀದಿಸಿ ಸಿದ್ದರಾಮಯ್ಯ ಅಲ್ಲಿ ಮನೆ ನಿರ್ಮಾಣ ಮಾಡಿ, ಬಳಿಕ ಆ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಮೈಸೂರಿನ ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು 2018ರ ನ.3ರಂದು ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ದೂರುದಾರ ಗಂಗರಾಜು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ಪುರಸ್ಕರಿಸಿದ್ದ ವಿಶೇಷ ನ್ಯಾಯಾಲಯ, ಬಿ ರಿಪೋರ್ಟ್ ರದ್ದುಪಡಿಸಿ ಸಿದ್ದರಾಮಯ್ಯ ಸೇರಿ 11 ಆರೋಪಿಗಳಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ 2019ರ ಆ.23ರಂದು ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.