ಜಿಲ್ಲೆ

ಡಿಡಿಪಿಯು ಆಗಿ ನಾಗಮಲ್ಲೇಶ್ ಅಧಿಕಾರ ಸ್ವೀಕಾರ

ಮೈಸೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಉಪನಿರ್ದೇಶಕರಾಗಿ ನಾಗಮಲ್ಲೇಶ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಉಪನಿರ್ದೇಶಕರಾಗಿದ್ದ ನಾಗಮ್ಮ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನಾಗಮಲ್ಲೇಶ್, ಶೈಕ್ಷಣಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ಉಪನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿರುವುದು ಸಂತಸ ತಂದಿದೆ. ಶೈಕ್ಷಣಿಕ ಪ್ರಗತಿ, ಗುಣಮಟ್ಟದ ಶಿಕ್ಷಣ, ಉತ್ತಮ ಫಲಿತಾಂಶ, ಕ್ರೀಡೆ ಮತ್ತು ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕುಂದುಕೊರತೆ ಮತ್ತು ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಿ, ಅವರೂ ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮೈಸೂರು ನಗರ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ಸಂಘದ ನಗರ ಅಧ್ಯಕ್ಷ ಎನ್.ಎಸ್.ಪಶುಪತಿ, ಮಹಾರಾಣಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಎ.ಸಿ.ಮಂಜೇಗೌಡ, ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಕೆ.ಎಂ.ಪುಟ್ಟು, ಉಪನ್ಯಾಸಕರಾದ ಡಾ.ಮಂಗಳಾಮೂರ್ತಿ, ಕೆ.ಎ.ಜಯನಂದ ಪ್ರಸಾದ್, ರಮಾನಂದ್ ಇತರರು ಇದ್ದರು.