ಜಿಲ್ಲೆ

ಡಿಡಿಪಿಐಗೆ ಶಾಸಕ ಸವದಿ ತರಾಟೆ

ಅಥಣಿ: ಗಡಿಭಾಗದ ಕನ್ನಡ ಶಾಲೆಗಳನ್ನು ಉನ್ನತೀಕರಣ ಮಾಡಲು ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ  ಹಂಚಾಟೆ ಅವರನ್ನು ಶಾಸಕ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡರು.

ಶಾಸಕ ಲಕ್ಷ್ಮಣ ಸವದಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸ್ಥಳೀಯರ ದೂರಿನ ಮೇರೆಗೆ ಚಿಕ್ಕೋಡಿ ಡಿಡಿಪಿಐ ಅವರಿಗೆ  ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಗಡಿಭಾಗದಲ್ಲಿ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು,  ಶಾಲೆಗಳನ್ನು ಮತ್ತಷ್ಟು ಅಭಿವದ್ಧಿಪಡಿಸುವುದರ ಜತೆಗೆ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವಂತೆ ತಿಳಿಸಿದರು.

ಅಥಣಿ ಭಾಗದಲ್ಲಿ ನೂತನ ಶಾಲೆಗಳಿಗೆ ಅಕಾರಿಗಳು ಪ್ರಸ್ತಾವನೆ ನೀಡುತ್ತಿಲ್ಲ. ನೂತನ ಶಾಲೆಗಳ ಪ್ರಸ್ತಾವನೆ ರಿಜೆಕ್ಟ್ ಮಾಡಿದ ಹಿನ್ನೆಲೆಯಲ್ಲಿ ಡಿಡಿಪಿಐ ವಿರುದ್ಧ ಗರಂ ಆದರು. ಅಥಣಿ ಹಾಗೂ ಕಾಗವಾಡ ಕ್ಷೇತ್ರದ ಗಡಿಭಾಗದಲ್ಲಿ ಇರುವ ಕನ್ನಡ ಶಾಲೆಗಳನ್ನು 7ನೇ ತರಗತಿಯಿಂದ 8ನೇ ತರಗತಿಯವರೆಗೆ ಉನ್ನತೀಕರಣ ಮಾಡಲು ಏಕೆ ನಿರಾಕರಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಯಾವುದೇ ಸರ್ಕಾರಿ ಶಾಲೆಗಳು ಬಂದ್ ಆಗದ ರೀತಿಯಲ್ಲಿ ಕೆಲಸ ಮಾಡಬೇಕು. ಒಂದು ವೇಳೆ ಶಾಲೆಗಳು ಬಂದ್ ಆದರೆ ಕೆಡಿಪಿ ಸಭೆಯಲ್ಲಿ ನೀವು ಉತ್ತರ ಹೇಳಬೇಕಾಗುತ್ತದೆ. ಸೆ. 25ರಂದು ಕೆಡಿಪಿ ಸಭೆ ಇದೆ ಅಲ್ಲಿ ಚರ್ಚಿಸೋಣ ಎಂದರು.