ಜಿಲ್ಲೆ

ಡಿಜಿಟಲ್ ಯುಗದಲ್ಲಿ ಸೃಜನಶೀಲತೆ ಮೂಲೆಗುಂಪು: ಕಲಾವಿದ ಸೋಮು ಅಭಿಮತ

ಮೈಸೂರು: ಹಿಂದಿನ ತಲೆಮಾರಿನ ಮಕ್ಕಳಲ್ಲಿ ಸಮೃದ್ಧವಾಗಿ ಇದ್ದ ಹತ್ತಾರು ಚಟುವಟಿಕೆಗಳು ಈಗ ಕಾಣೆಯಾಗುತ್ತಿವೆ ಎಂದು ಚಿತ್ರಕಲಾವಿದ ಸೋಮ ಅಭಿಪ್ರಾಯಪಟ್ಟರು.
ಸಹಜ ಸಮೃದ್ಧ ಸಹಯೋಗದಲ್ಲಿ ನೆಕ್ಸಸ್ ಸೆಂಟರ್ ಸಿಟಿಮಾಲ್‌ನಲ್ಲಿ ಮೂರು ದಿನ ಕಾಲ ಆಯೋಜಿಸಿದ್ದ ಹಲಸಿನ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ತಲೆಮಾರಿನ ಮಕ್ಕಳ ಬಾಲ್ಯ ಹತ್ತಾರು ಚಟುವಟಿಕೆಗಳಿಂದ ಸಮೃದ್ಧವಾಗಿತ್ತು. ಗಾಳಿಪಟ ತಯಾರಿಸಿ ಹಾರಿಸುವ ಸಂಭ್ರಮ ಮಕ್ಕಳ ಸೃಜನಶೀಲತೆಗೆ ಪ್ರೋತ್ಸಾಹ ನೀಡುವ ಅವಕಾಶ ಒದಗಿಸಿತ್ತು. ಆದರೆ, ಇಂದಿನ ಡಿಜಿಟಲ್ ಯುಗ ಮಕ್ಕಳ ಸೃಜನಶೀಲತೆಯನ್ನು ಮೂಲೆಗುಂಪು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ, ಪ್ರೇರಣೆ ನೀಡಬೇಕು. ಪ್ರತಿ ಮಕ್ಕಳ ಚಿತ್ರವೂ ಕಲಾಕೃತಿ ಇದ್ದಂತೆ. ಅದಕ್ಕೆ ಬಹುಮಾನದ ಚೌಕಟ್ಟು ಹಾಕಿ, ಮಕ್ಕಳ ಸೃಜನಶೀಲತೆಯನ್ನು ಕುಗ್ಗಿಸಬಾರದು.ಅವರ ಇಚ್ಛೆಗೆ ತಕ್ಕಂತೆ ಚಿತ್ರ ರಚನೆ ಮಾಡುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ಕೊಡಬೇಕು. ಮಕ್ಕಳ ಚಿತ್ರಗಳನ್ನು ಕಲಾಕೃತಿ ಎಂದು ಪರಿಗಣಿಸಿ ಮನೆಯ ಗೋಡೆಯ ಮೇಲೆ ಪ್ರದರ್ಶಿಸಬೇಕು ಎಂದರು.
ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿ, ಹಲಸು ಮಕ್ಕಳಲ್ಲಿ ಕುತೂಹಲ ಮತ್ತು ಸೃಜನಶೀಲತೆಯನ್ನು ಅರಳಿಸುವ ನಿಸರ್ಗದ ಕಲಾಕೃತಿ. ಹಲಸಿನ ಸಂಸ್ಕೃತಿ ಮತ್ತು ಔಷಧೀಯ ಗುಣಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುವ ಸ್ಪರ್ಧೆ ಇದಾಗಿದೆ. ಸೇಬು, ಕಿತ್ತಳೆಯಂತೆ ಮಕ್ಕಳು ಹಲಸಿನ ಹಣ್ಣನ್ನು ಇಟ್ಟಪಟ್ಟು ತಿನ್ನುವಂತಾಗಬೇಕು ಎಂದು ಹೇಳಿದರು.
ಕ್ಷಿತಿ ಎಸ್.ಪಾಟೀಲ್, ಎಂ.ಎಂ.ಚಂದನಾ, ಸ್ಕಂದಾ ಆರ್.ಆಚಾರ್ಯ ಮತ್ತು ಬಿ.ರೋಷಿಣಿ ಅವರ ಚಿತ್ರಗಳು ನೋಡುಗರ ಪ್ರಶಂಸೆಗೆ ಪಾತ್ರವಾದವು. ನೆಕ್ಸಸ್ ಸೆಂಟರ್ ಸಿಟಿ ಮಾಲ್ನ ವ್ಯವಸ್ಥಾಪಕ ಮಧು ಸುದರ್ಶನ್, ಎನ್.ಕವಿತಾ, ಸಿ.ಎನ್.ಕೇಶವಮೂರ್ತಿ ಇತರರು ಇದ್ದರು.