ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ನಿರಾಮಯ ಮೆಡಿಕಲ್ ಸೆಂಟರ್ ಕಟ್ಟಡದ ಮೊದಲ ಮಹಡಿಯಲ್ಲಿ ಅಳವಡಿಸಿರುವ ಡಿಜಿಟಲ್ ಪಿಇಟಿ (ಪಾಸಿಟ್ರಾನ್ ಎಮಿಷನ್ ಟೊಮೊಗ್ರಾಫಿ)-ಸಿಟಿ ಸ್ಕ್ಯಾನಿಂಗ್ ಯಂತ್ರದ ಪ್ರಾರಂಭೋತ್ಸವ ಫೆ. 12ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ನ್ಯೂಮೋಡ್ ಪ್ರೖೆವೇಟ್ ಲಿಮಿಟೆಡ್ ಅಧ್ಯಕ್ಷ ಡಾ. ಬಿ.ಆರ್. ಪಾಟೀಲ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಎಸ್ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕೆಎಲ್ಇ ಜೆಜಿಎಂಎಂ ವೈದ್ಯಕೀಯ ಕಾಲೇಜ್ ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ ಪಾಲ್ಗೊಳ್ಳುವರು ಎಂದರು.
ಬೆಂಗಳೂರು ಬಿಟ್ಟರೆ ಬೇರೆ ಎಲ್ಲಿಯೂ ಡಿಜಿಟಲ್ ಪಿಇಟಿ-ಸಿಟಿ ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಿಲ್ಲ. ಸುಮಾರು 14.5 ಕೋಟಿ ರೂ. ವೆಚ್ಚದ ಈ ಯಂತ್ರವು ಉನ್ನತ ತಂತ್ರಜ್ಞಾನದಿಂದ ಕೂಡಿದೆ. ಕ್ಯಾನ್ಸರ್ ಪತ್ತೆ ವಿಧಾನದಲ್ಲಿ ಅತ್ಯಂತ ನಿಖರವಾದ ಫಲಿತಾಂಶವನ್ನು ನೀಡುತ್ತದೆ. ಬಹಳ ಮುಂಚಿತ ಹಂತದಲ್ಲಿಯೇ ಎಲ್ಲ ಬಗೆಯ ಕ್ಯಾನ್ಸರ್ ಅನ್ನು ಪತ್ತೆ ಮಾಡಬಹುದಾಗಿದೆ ಎಂದು ತಿಳಿಸಿದರು.
ನ್ಯೂಮೋಡ್ ಪ್ರೖೆವೇಟ್ ಲಿಮಿಟೆಡ್ ಎಂಡಿ ಡಾ. ರಶ್ಮಿ ಅಂಗಡಿ ಮಾತನಾಡಿ, ಇದು ಅತ್ಯಂತ ಸುಧಾರಿತ ಹಾಗೂ ಸುರಕ್ಷಿತ ಸ್ಕ್ಯಾನಿಂಗ್ ಯಂತ್ರವಾಗಿದೆ. ವಿಕಿರಣದ ಪರಿಣಾಮವು ಶೇ. 50ರಿಂದ 70ರಷ್ಟು ತಗ್ಗಿಸುತ್ತದೆ. ಕೇವಲ 7 ನಿಮಿಷಗಳಲ್ಲಿ ಸಂಪೂರ್ಣ ದೇಹದ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ರೋಗ ನಿರ್ಣಯಕ್ಕೆ ಪೂರಕವಾಗಿ ಉತ್ತಮ ಚಿತ್ರ ಸ್ಪಷ್ಟತೆ (ಇಮೇಜಿಂಗ್)ಯನ್ನು ಒದಗಿಸುತ್ತದೆ. ಕ್ಯಾನ್ಸರ್ ಹಂತವನ್ನು ತಿಳಿಯುವುದರ ಜತೆಗೆ ಕ್ಯಾನ್ಸರ್ ಚಿಕಿತ್ಸೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ತಿಳಿಸುತ್ತದೆ ಎಂದರು.