ಬೀದರ್: ತಾಲ್ಲೂಕಿನ ಮರಕಲ್ ಗ್ರಾಮ ಪಂಚಾಯಿತಿಯಲ್ಲಿ ಡಿಜಿಟಲ್ ಖಾತಾ ಸೃಷ್ಟಿ ಹಾಗೂ ಮುಟೇಷನ್‍ಗೆ ಯಾರಿಗೂ ನಿಗದಿಗಿಂತ ಹೆಚ್ಚು ಹಣ ಕೊಡುವ ಅವಶ್ಯಕತೆ ಇಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ ಜಾಬಾ ತಿಳಿಸಿದ್ದಾರೆ.
ಡಿಜಿಟಲ್ ಖಾತಾ ಸೃಷ್ಟಿ ಮತ್ತು ಮುಟೇಷನ್‍ಗೆ ಪಂಚಾಯಿತಿ ರೂ. 5,100 ಶುಲ್ಕ ಪಾತ್ರ ನಿಗದಿಪಡಿಸಿದೆ. ಆದರೆ, ಕೆಲ ಮಧ್ಯವರ್ತಿಗಳು ಪಂಚಾಯಿತಿ ಅಭಿವೃದ್ಧಿ ಹೆಸರಲ್ಲಿ ರೂ. 8 ಸಾವಿರದಿಂದ ರೂ. 15 ಸಾವಿರ ವರೆಗೆ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಬೀದರ್ ನಗರಕ್ಕೆ ಸಮೀಪ ಇರುವ ಕಾರಣ ಮರಕಲ್ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಕೃಷಿ ಜಮೀನುಗಳು ವಸತಿ ಉದ್ದೇಶಕ್ಕೆ ಪರಿವರ್ತನೆ ಹೊಂದಿ, ಬಡಾವಣೆಗಳಾಗಿ ಮಾರ್ಪಾಡಾಗುತ್ತಿವೆ. ಹೀಗಾಗಿ ಪಂಚಾಯಿತಿಯಲ್ಲಿ ನಿವೇಶನಗಳ ಮಾರಾಟ, ಹೊಸ ನಿವೇಶನಗಳ ಅನುಮೋದನೆ ಹಾಗೂ ಹಕ್ಕು ವರ್ಗಾವಣೆ ಪ್ರಕ್ರಿಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.