ಚಿಂಚೋಳಿ: ಚAದಾಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಶನಿವಾರ ಕಾಲೇಜಿನ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‌ನಿಂದ ಬಿ ಪ್ಲಸ್ ಮಾನ್ಯತೆ ಪಡೆದಿದೆ. ಆದರೂ ಮೂಲ ಸೌಕರ್ಯಗಳಿಲ್ಲ. ಮಹಿಳಾ ಶಿಕ್ಷಕರಿಲ್ಲ, ವಿದ್ಯಾರ್ಥಿಗಳಿಗೆ ಶೌಚಗೃಹ ಸಮಸ್ಯೆ, ಉತ್ತಮ ಆಟದ ಮೈದಾನ, ವಿವಿಧ ವಿಷಯವಾರು ಶಿಕ್ಷಕರ ಕೊರತೆ, ಕಾಲೇಜಿನ ಪ್ರಾಂಶುಪಾಲರ ಗೈರು ಹಾಜರಿ ಹೀಗೆ ಹಲವಾರು ಸಮಸ್ಯೆಗಳಿವೆ. ಇನ್ನು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ದೂರಿದರು.
ಕೂಡಲೇ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ಬಗ್ಗೆ ಸಮರ್ಪಕ ಭರವಸೆ ಸಿಗುವವರೆಗೂ ಕ್ಲಾಸ್‌ಗಳಿಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರು.
ಸುದ್ದಿ ತಿಳಿದು ಚಿಂಚೋಳಿ ಠಾಣೆ ಸಿಬ್ಬಂದಿ ಮಾರುತಿ ಪೂಜಾರಿ, ರಮೇಶ ರಾಠೋಡ್ ಸ್ಥಳಕ್ಕೆ ಆಗಮಿಸಿ ಸಮಗ್ರ ಮಾಹಿತಿ ಪಡೆದು, ಪ್ರತಿಭಟನೆಯೇ ಸಮಸ್ಯೆಗಳಿಗೆ ಪರಿಹಾರವಲ್ಲ. ಎಲ್ಲ ಸಮಸ್ಯೆಗಳನ್ನು ನಿಮ್ಮೆಲ್ಲ ಬೇಡಿಕೆಗಳ ಪಟ್ಟಿ ಕೊಡಿ, ಉನ್ನತ ಅಧಿಕಾರಿಗಳ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹೋರಾಟ ಕೈಬಿಟ್ಟು ಕ್ಲಾಸ್‌ಗಳಿಗೆ ಹೋಗಿ ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ವಿದ್ಯಾರ್ಥಿಗಳಾದ ಸಚಿನ್, ನಿತೀನ್, ಶಿವಕುಮಾರ, ಹರೀಶ, ಮುಸ್ಕಾನ್, ಭವಾನಿ, ಕಾವೇರಿ ಇತರರಿದ್ದರು.