ಚಿತ್ರದುರ್ಗ: ಪಕ್ಷ ನಿಷ್ಠೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಮತೀಯ ಶಕ್ತಿಗಳೊಡನೆ ಕೈ ಜೋಡಿಸುವುದಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
ಬಚ್ಚಬೋರನಹಟ್ಟಿ ಸಮೀಪದ ಎಸ್.ಪಿ. ಆನಂದ್ ಅವರ ಕುರಿ ಫಾರಂಗೆ ಗುರುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿವಕುಮಾರ್ ಬಿಜೆಪಿ ಸೇರುತ್ತಾರೆಂಬುದು ಸತ್ಯಕ್ಕೆ ದೂರ. ಬಿಜೆಪಿ ಹಾಗೂ ಅವರ ರಾಜಕೀಯ ವೈರಿಗಳು ನಡೆಸುತ್ತಿರುವ ಈ ಅಪಪ್ರಚಾರ ನಿಲ್ಲಬೇಕು. ಶಿವಕುಮಾರ್ ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಜಾತ್ಯತೀತ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ರಾಜಕೀಯ ಬದುಕು ಕಟ್ಟಿಕೊಂಡವರು. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
2028ರ ವಿಧಾನಸಭಾ ಚುನಾವಣೆ ನನ್ನ ನಾಯಕತ್ವದಲ್ಲಿಯೇ ನಡೆಯುತ್ತದೆಂದು ಹೇಳಿರುವಾಗ ಅವರು ಬಿಜೆಪಿ ಸೇರುವ ಮಾತೆಲ್ಲಿಂದ ಬಂತು? ಇದೆಲ್ಲ ವಿರೋಧಿಗಳ ಕುಹಕ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಶಕ್ತಿಯಾಗಿರುತ್ತಾರೆ ಎಂದರು. ಎಸ್.ಪಿ. ಆನಂದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ದೊಡ್ಡಮಲ್ಲಯ್ಯ ಇದ್ದರು.