ಜಿಲ್ಲೆ

ಡಿಕೆಶಿ ಬಿಜೆಪಿ ಸೇರ್ಪಡೆ ಕೇವಲ ವದಂತಿ

ಮದ್ದೂರು: ವಿರೋಧ ಪಕ್ಷದ ನಾಯಕರಿಗೆ ಅಧಿಕಾರವಿಲ್ಲದೆ ಖಾಲಿ ಕುಳಿತಿರುವ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಆಡಳಿತ ನಡೆಸುತ್ತಿರುವ ಸರ್ಕಾರದ ಮೇಲೆ ಆರೋಪ ಮತ್ತು ಹಲವು ಆಪಾದನೆಗಳನ್ನು ನಿರಂತರವಾಗಿ ಮಾಡುವುದರ ಮೂಲಕ ಕಾಲ ಕಳೆಯುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ ಆರೋಪಿಸಿದರು.

ತಾಲೂಕಿನ ಕುದರಗುಂಡಿ ಗ್ರಾಮದಲ್ಲಿ 15 ಲಕ್ಷ ರೂ.ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಪಕ್ಷದವರು ದಿನನಿತ್ಯ ಇಲ್ಲಸಲ್ಲದ ವಿಷಯಗಳನ್ನೇ ಇಟ್ಟುಕೊಂಡು ಪ್ರತಿಭಟನೆ ಮತ್ತು ಇನ್ನಿತರ ಆರೋಪಗಳನ್ನು ಮಾಡುವುದರ ಮೂಲಕ ರಾಜ್ಯದಲ್ಲಿ ವಿರೋಧ ಪಕ್ಷವಿದೆ ಎಂಬುವುದನ್ನು ಬಿಂಬಿಸಲು ಹೊರಟಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ರಾಜ್ಯದ ಅಭಿವೃದ್ಧಿ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲ. ರಾಜ್ಯದ ಜನರ ದಿಕ್ಕು ತಪ್ಪಿಸಲು ಹೊರಟಿದ್ದು ಜನರು ಎಲ್ಲವನ್ನೂ ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಹಿಂದೆ ಬಿಜೆಪಿ ಸೇರುವ ಅವಕಾಶವಿತ್ತಾದರೂ ಅದನ್ನು ತಿರಸ್ಕಾರ ಮಾಡಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬುದು ಕೇವಲ ವದಂತಿ ಎಂದು ಹೇಳಿದರು.

ಮಾಜಿ ಸಚಿವ ಕೆ.ಎನ್.ರಾಜಣ್ಣ ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಹೈಕಮಾಂಡ್ ಅಗತ್ಯ ಕ್ರಮ ಕೈಗೊಳ್ಳಲಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಹಲವು ಮಠಾಧೀಶರು ರಾಜಣ್ಣ ಅವರನ್ನು ಭೇಟಿ ಮಾಡಿ ಸಮಾಧಾನದ ಮಾತುಗಳನ್ನಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಸಮುದ್ರವಿದ್ದಂತೆ. ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು. ಕೆ.ಎನ್.ರಾಜಣ್ಣ ಬಿಜೆಪಿ ಸೇರುತ್ತಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

ತಾಲೂಕಿನ ಬೋರಾಪುರ, ಕುದರಗುಂಡಿ, ಮಠದದೊಡ್ಡಿ, ಕಳ್ಳಿಮೆಳ್ಳೆದೊಡ್ಡಿ, ಅಜ್ಜಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ನಾಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್, ಮುಖಂಡರಾದ ಶ್ರೀಧರ್, ಮಧುಕುಮಾರ್, ನಯನ್‌ಕುಮಾರ್, ಸುಧಾಕರ್, ಶೇಖರ್ ಇತರರಿದ್ದರು.