ಬಾಗಲಕೋಟೆ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.೧೮ ರಂದು ಬಿಜೆಪಿಯ ಎಲ್ಲಾ ೨೪ ಪ್ರಕೋಷ್ಠಗಳ ಪದಾಽಕಾರಿಗಳ ರಾಜ್ಯ ಸಮಾವೇಶ - "ಶಕ್ತಿ ಸಂಗಮ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಬುದ್ಧರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಡಾ.ಪ್ರಕಾಶ ಜೆ.ಪಿ. ಹೇಳಿದರು.
ಸಮಾವೇಶದಲ್ಲಿ ರಾಜ್ಯ, ಜಿಲ್ಲಾ ಹಾಗೂ ಮಂಡಲ ಸ್ತರದ ಎಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಒಟ್ಟು ೧೫,೦೦೦ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದು ಜನರನ್ನು ಸೇರಿಸುವ ಸಮಾವೇಶ ಅಲ್ಲ. ಕಾರ್ಯಕರ್ತರನ್ನು ಸೇರಿಸುವ ಸಮಾವೇಶವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ರೈಲ್ವೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಸಮಾರೋಪ ಭಾಷಣ. ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ. ಬಿ. ಭಾನುಪ್ರಕಾಶ್ ಹಾಗೂ ಸಹ ಸಂಯೋಜಕ ಡಾ. ಶಿವಯೋಗಿ ಸ್ವಾಮಿ ಮತ್ತು ಜಯತೀರ್ಥ ಕಟ್ಟಿ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕಂಚಿ ಮಾತನಾಡಿ, ಡಿ.೧೫ರಂದು ಬಿಜೆಪಿ ನೂತನ ಜಿಲ್ಲಾ ಕಾರ್ಯಾಲಯವನ್ನು ವರ್ಚುವಲ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರು ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆ ಕಚೇರಿಯಲ್ಲಿ ಹೋಮ,ಹವನ, ಗೋಮಾತೆ ಪೂಜೆ ನಡೆಯಲಿದೆ ಎಂದು ಹೇಳಿದರು.
ಮೀನುಗಾರರ ಪ್ರಕೋಷ್ಠದ ಸಂಚಾಲಕ ನಾಗಪ್ಪ ಅಂಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಜಿಲ್ಲಾ ಮಾಧ್ಯಮ ಸಂಚಾಲಕ ನರೇಂದ್ರ ಕುಪ್ಪಸ್ತ ಸುದ್ದಿಗೋಷ್ಠಿಯಲ್ಲಿ ಇದ್ದರು.