ಬಾಗಲಕೋಟೆ: ಜೆಡಿಎಸ್ ಪಕ್ಷದ ಸಂಘಟನಾ ಸಭೆ, ಪಕ್ಷ ಸೇರ್ಪಡೆ ಕಾರ್ಯಕ್ರಮ ಡಿ.೧೮ ರಂದು ನವನಗರದ ಕಲಾಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.
ಅಂದು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಕ್ತಾರ ನಜ್ಮಾ ನಜೀರ ಸೇರಿದಂತೆ ವಿವಿಧ ನಾಯಕರು ಆಗಮಿಸಲಿದ್ದಾರೆ. ಶಿಕ್ಷಕರ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದ ಪ್ರೊ.ನಿವಾಸ ಗೌಡರ ಸೇರಿದಂತೆ ಅನೇಕ ಕರ‍್ಯಕರ್ತರು ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ೫ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಜೋರಾಗಿದೆ. ಉತ್ತಮ ಸ್ಪಂದನೆ ದೊರೆಯುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಪಂಚ ರತ್ನ ಯೋಜನೆ, ಯಾತ್ರೆ ರಾಜ್ಯದಲ್ಲಿ ಬೆಂಬಲ ವ್ಯಕ್ತವಾಗಲಿದೆ. ಸ್ವತಂತ್ರವಾಗಿ ಜೆಡಿಎಸ್ ಅಽಕಾರಕ್ಕೆ ಬರುವ ಮುನ್ಸೂಚನೆ ಇದೆ ಎಂದ ಅವರು, ಬಾದಾಮಿ ಮತಕ್ಷೇತ್ರಕ್ಕೆ ನಾನೇ ಪಕ್ಷದ ಅಭ್ಯರ್ಥಿ. ಇದರಲ್ಲಿ ಸಂಶಯ ಬೇಡ. ವರಿಷ್ಠರ ಸೂಚನೆ ಮೇರೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಮಾವಿನಮರದ ಸ್ಪಷ್ಟಪಡಿಸಿದರು.
ಪ್ರೊ.ಶ್ರೀನಿವಾಸ ಗೌಡರ ಮಾತನಾಡಿ, ಜೆಡಿಎಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ನಂಬಿ ಪಕ್ಷ ಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಲು ಬದ್ಧ. ಬಾಗಲಕೋಟೆ ಮತಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಲು ಪಕ್ಷದ ಮುಖಂಡರು ಕೂಡಾ ಸಹಮತ ವ್ಯಕ್ತಪಡಿಸಿದ್ದಾರೆ. ೯೪ ಗ್ರಾಮಗಳು, ೨೩೦ ಬೂತಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.
ಮುಖಂಡರಾದ ಕೃಷ್ಣಾ ಪಾಟೀಲ, ಯಾಸೀನ ನದಾಫ, ಬಿ.ಎಸ್.ತಹಸೀಲ್ದಾರ, ಎಸ್.ಕೆ. ಕಾಮಾ ಉಪಸ್ಥಿತರಿದ್ದರು.