ಬಾಗಲಕೋಟೆ: ಶೆ.೯.೫ ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ೫.೫೦೦ ರೂ ಬೆಂಬಲ ಬೆಲೆ ನಿಗದಿಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.೧೨ ರಂದು ನಡೆಯುವ ಚಳಿಗಾಳ ಅಽವೇಶನದ ವೇಳೆ ಸುವರ್ಣಸೌದ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಜಿ. ನಾಗರಾಜ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಽ ಕಬ್ಬು ನಿಯಂತ್ರಣ ತಿದ್ದುಪಡಿ ಆದೇಶ ೨೦೨೪ರ ಮಸೂದೆ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಸಕ್ಕರೆ ಇಳುವರಿ ಪ್ರಕಟಣೆಯಲ್ಲಿ ಮತ್ತು ತೂಕದಲ್ಲಿ ಮೋಸ ನಡೆಯುತ್ತಿದ್ದು, ಇವುಗಳ ಪಾರದರ್ಶಕವಾಗಿ ಪರೀಕ್ಷಿಸಲು ಪ್ರತಿ ಕಾರ್ಖಾನೆ ವ್ಯಾಪ್ತಿಗೆ ಸಮಿತಿ ರಚಿಸಿ ಆ ಸಮಿತಿಗೆ ೫ ಮಂದಿ ಕಬ್ಬು ಬೆಳೆಗಾರರ ನೇಮಿಸಬೇಕು. ಕಬ್ಬು ಸರಬರಾಜು ಮಾಡಿದ ೧೪ ದಿನದೊಳಗೆ ಹಣ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿಗೆ ಪ್ರತಿ ಟನ್‌ಗೆ ೧೫೦ ರೂ. ಎಸ್‌ಎಪಿ ನೀಡಲು ಆದೇಶಿಸಿದ್ದು, ಅದ ಬಾಕಿ ಹಣ ರೈತರಿಗೆ ಶೀಘ್ರವಾಗಿ ನೀಡಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ನಿಯಮಕ್ಕೆ ವಿರುದ್ಧವಾಗಿ ಹೆಚ್ಚುವರಿ ಪಡೆದಿರುವ ಬಾಗಲಕೋಟೆಯ ಹಳಿಯಾಳ, ರಾಮದುರ್ಗದ ಇಐಡಿ ಪ್ಯಾರಿ ಶುಗರ್ ಮತ್ತು ಅಫಜಲಪುರದ ರೇಣುಕಾ ಶುಗರ್, ಕೆಪಿಆರ್ ಶುಗರ್ ಕಾರ್ಖಾನೆಗಳಿಂದ ರೈತರಿಗೆ ಹಣ ವಾಪಸ್ ಕೊಡಿಸಬೇಕು ಜೊತೆಗೆ ಆ ಕಾರ್ಖಾನೆಗಳ ವಿರುದ್ಧ ಸಮಗ್ರ ತನಿಖೆಯಾಗಬೇಕು. ಕಬ್ಬು ಬೆಳೆದ ೧೨ ತಿಂಗಳಿಗೆ ಕಟಾವು ಮಾಡಬೇಕು. ಹೆಚ್ಚುವರಿ ತಿಂಗಳುಗಳಾಗಿ ರೈತರಿಗಾಗುವ ನಷ್ಟ ಕಾರ್ಖಾನೆ ಮತ್ತು ಸರ್ಕಾರ ಭರಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಎನ್.ಎಲ್ ಭರತರಾಜ, ಅವಿನಾಶ ಸಾರಥಿ, ಚಂದ್ರಶೇಖರ ಕಮತರ, ಸಿದ್ದು ದೊಡ್ಡನಗೌಡ ಉಪಸ್ಥಿತರಿದ್ದರು.