ಜಿಲ್ಲೆ

ಡಿ.೧, ೨ರಂದು ಶರಣ ಸಂಸ್ಕೃತಿ ಉತ್ಸವ

ಹುಲಸೂರು: ಪಟ್ಟಣದ ಶ್ರೀ ಜಗದ್ಗುರು ಅಲ್ಲಮ ಪ್ರಭುಗಳ ಶೂನ್ಯಪೀಠ ಅನುಭವ ಮಂಟಪದಲ್ಲಿ ಡಿ.೧, ೨ರಂದು ಜರುಗಲಿರುವ ಶರಣ ಸಂಸ್ಕೃತಿ ಉತ್ಸವ, ವಚನ ರಥೋತ್ಸವವನ್ನು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ಪಟ್ಟಣದ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ, ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮಠದಿಂದ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ಣಯಿಸಲಾಯಿತು.
ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ನ.೨೬ರಿಂದ ಡಿ.೨ರವರೆಗೆ ಪ್ರವಚನಕಾರ ಶ್ರೀ ಬಸವಾನಂದ ಸ್ವಾಮೀಜಿ ಅವರಿಂದ ನಿತ್ಯ ಪ್ರವಚನ ನಡೆಯಲಿದೆ. ಶ್ರೀ ಗುರು ಬಸವೇಶ್ವರ ಕಲ್ಯಾಣ ಶ್ರೀ, ಜಗದ್ಗುರು ಅಲ್ಲಮ ಪ್ರಭು ಶ್ರೀ ಹಾಗೂ ಅಕ್ಕ ಮಹಾದೇವಿ ಶ್ರೀ ಪ್ರಶಸ್ತಿಗಳನ್ನು ೨೫ ಸಾವಿರ ರೂ. ನಗದು, ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರದ ೭೨ ಸಾಧಕರಿಗೆ ಬಸವ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಶಿವಯೋಗ ಮಂದಿರ ಉಪಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ, ಗಾಯಕಿ ಶಿವಾನಿ ಶಿವದಾಸ ಸ್ವಾಮಿ, ಮಠಾಧೀಶರು, ಸಚಿವರು, ಜನಪ್ರತಿನಿಧಿಗಳು, ಗಣ್ಯರು, ಸಾಹಿತಿಗಳು, ಕಲಾವಿದರು, ಶರಣರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಧಬಾಲೆ, ಗ್ರಾಪಂ ಮಾಜಿ ಸದಸ್ಯ ಶ್ರೀಮಂತರಾವ ಜಾನಬಾ, ರಾಜಕುಮಾರ ನಿಡೋದೆ ಅವರು ಸಲಹೆ ನೀಡಿದರು.
ಜಾನಪದ ಪರಿಷತ್ ತಾಲೂಕಾಧ್ಯಕ್ಷ ಶಿವರಾಜ ಖಪಲೆ, ಅಲ್ಲಮ ಪ್ರಭುಗಳು ಶೂನ್ಯಪೀಠ ಅನುಭವ ಮಂಟಪದ ಅಧ್ಯಕ್ಷ ಬಸವರಾಜ ಮುಕ್ತಾ, ಪದಾಧಿಕಾರಿಗಳಾದ ರಮೇಶ ತೋಟದ, ಗುರುನಾಥ ಬಾಲಕುಂದೆ, ಸಡಕಯ್ಯ ಸ್ವಾಮಿ, ಮಡೋಳಪ್ಪ ಬಾಲಕುಂದೆ, ವಿಲಾಸ ಘುಳೆ, ಶಿವಕುಮಾರ ಸ್ವಾಮಿ, ರಾಜಕುಮಾರ ತೊಂಡಾರೆ, ಶಿವರಾಜ ಚಾಕೋತೆ, ಗುರುನಾಥ ಖಂಡಾಳೆ, ಬಾಬುರಾವ ಪಾರಶೆಟ್ಟೆ, ಜಗನ್ನಾಥ ಹಂದಿಕೆರೆ ಇತರರಿದ್ದರು.