ಜಿಲ್ಲೆ

ಡಿ.ಕೆ. ರವಿ ಸಮಾಧಿಗೆ ಶಾಸಕ ಮುನಿರತ್ನ ಪೂಜೆ!

ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ದೊಡ್ಡ ಕೊಪ್ಪಲು ಗ್ರಾಮದ ದಿವಂಗತ ಐಎಎಸ್​ ಅಧಿಕಾರಿ ಡಿ.ಕೆ. ರವಿ ಸಮಾಧಿಗೆ ಭಾನುವಾರ 10ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್​.ಆರ್​. ನಗರದ ಶಾಸಕ ಮುನಿರತ್ನ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ರಾಜಕೀಯ ವಿರೋಧಿಯಾಗಿರುವ ಹಿನ್ನೆಲೆ ಹಾಗೂ ಪತಿ ಸಮಾಧಿ ಕಡೆಗೆ ಪತ್ನಿ ತಲೆ ಹಾಕದಿದ್ದರೂ ಶಾಸಕ ಮುನಿರತ್ನ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇನ್ನೂ 2015 ಮಾರ್ಚ್​ 16 ರವಿ ಮೃತಪಟ್ಟಿದ್ದು, 2025ರ ಮಾರ್ಚ್​ 16ಕ್ಕೆ ಹತ್ತು ವರ್ಷ ತುಂಬಿದೆ. ಈ ಹತ್ತು ವರ್ಷಗಳಲ್ಲಿ ಡಿ.ಕೆ ರವಿ ಸಮಾಧಿಗೆ ಹಲವರು ಭೇಟಿ ನೀಡಿದ್ದರು. ಆದರೆ ಶಾಸಕ ಮುನಿರತ್ನ ಭೇಟಿ ನೀಡಿದ್ದು ಸ್ಥಳಿಯರಲ್ಲಿ ಹಾಗೂ ರಾಜಕೀಯ ಮುಖಂಡರಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದ ಡಿ.ಕೆ.ರವಿ ಪತ್ನಿ ಕುಸುಮಾ ವಿರುದ್ಧ ಡಿ.ಕೆ.ರವಿ ತಾಯಿ ಗೌರಮ್ಮ ಅವರ ವಿವಾದಿತ ವಿಡಿಯೋ ಹರಿಬಿಟ್ಟ ಕಾರಣ ಚುನಾವಣೆ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ ಡಿ.ಕೆ.ರವಿ ಸಮಾಧಿಗೆ ಭೇಟಿ ನೀಡಿರುವುದು ತೀವ್ರ ಚರ್ಚೆ ಹುಟ್ಟು ಹಾಕಿದೆ.