ಜಿಲ್ಲೆ

ಡಿ.9ರಂದು ಬೃಹತ್ ರಾಷ್ಟ್ರೀಯ ಲೋಕ ಅದಾಲತ್

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಡಿಸೆಂಬರ್ 9ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬೃಹತ್ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ,ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಬಿ.ಎಸ್.ರೇಖಾ ಹೇಳಿದರು. ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು, ಕಕ್ಷಿದಾರರು ಆದಾಲತ್‌ನ ಸದುಪಯೋಗ ಪಡೆಯುವಂತೆ ಕೋರಿದರು.
ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ,ಚೆಕ್‌ಅಮಾನ್ಯ,ಬ್ಯಾಂಕ್ ವಸೂಲಿ,ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರ ಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಆಸ್ತಿವಿಭಾಗ, ಬ್ಯಾಂಕ್ ಕ್ಲೇಮ್‌ಗಳು, ವೈವಾಹಿಕ, ಭೂಸ್ವಾಧೀನ, ವೇತನ ಮತ್ತು ಭತ್ಯೆಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಹಾಗೂ ರಾಜೀಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳನ್ನು ಅದಾಲತ್‌ನಲ್ಲಿ ಬಗೆಹರಿಸಲಾಗುವುದು.
ಇದರಿಂದ ಕಕ್ಷಿದಾರರಿಗೆ, ಸಮಯ, ಹಣದ ಉಳಿತಾಯದೊಂದಿಗೆ ನ್ಯಾಯವೂ ಶೀಘ್ರ ದೊರೆಯಲಿದೆ. ರಾಜಿ ಪ್ರಕರಣಗಳಲ್ಲಿ ಅಪೀಲಿಗೆ ಅವಕಾಶವಿರದು. ರಾಜಿಯಾದ ಸಿವಿಲ್ ಪ್ರಕರಣಗಳಲ್ಲಿ ಕೋರ್ಟ್ ಶುಲ್ಕ ಹಿಂದಿರುಗಿಸಲಾಗುತ್ತದೆ. ತ್ವರಿತ ಪ್ರಕರಣ ಇತ್ಯರ್ಥದಿಂದ ಉಭಯ ಕಕ್ಷಿದಾರರಿಗೂ ಸುಖ, ಸಂತೋಷ, ನೆಮ್ಮದಿಯ ಜೀವನ ಸಾಧ್ಯವಾಗಲಿದೆ.
ಕಳೆದ ಅ.1ರವರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 40375 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 1930 ಪ್ರಕರಣಗಳನ್ನು ಅದಾಲತ್‌ಗೆ ಕಳುಹಿಸಲಾಗಿದೆ. 66 ಪ್ರಕರಣಗಳು ಇತ್ಯರ್ಥಕ್ಕೆ ತೀರ್ಮಾನವಾಗಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳ ಇತ್ಯರ್ಥ ನಿರೀಕ್ಷೆ ಇದೆ. ಆದಾಲತ್ ಕುರಿತ ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (08194-222322,9141193935)ವನ್ನು ಸಂಪರ್ಕಿಸ ಬಹುದೆಂದರು. ಹಿರಿಯ ಸಿವಿಲ್‌ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.