ಜಿಲ್ಲೆ

ಡಿ.8ರಿಂದ ನಾಲ್ಕುದಿನ ಮೈಸೂರಿನಲ್ಲಿ ಮೈ ಬಿಲ್ಡ್ ವಸ್ತು ಪ್ರದರ್ಶನ

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಡಿ.8ರಿಂದ 12ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ‘ಮೈ ಬಿಲ್ಡ್-22’ ವಸ್ತುಪ್ರದರ್ಶನ ಆಯೋಜಿಸಲಾಗಿದೆ.
ಡಿ.8ರಂದು ಬೆಳಗ್ಗೆ 11ಕ್ಕೆ ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತಿನಂದಜೀ ಉದ್ಘಾಟಿಸುವರು. ಡಿ.12ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಲ್ಟ್ರಾ ಟೆಕ್ ಸಿಮೆಂಟ್ ಲಿ.ನ ತಾಂತ್ರಿಕ ಗ್ರಾಹಕ ಪರಿಹಾರಗಳ ಪ್ರಾದೇಶಿಕ ಮುಖ್ಯಸ್ಥ ಅಶೋಕ ರೆಡ್ಡಿ, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎ.ವಿ.ಶ್ರೀಧರ್ ಭಾಗವಹಿಸುವರು ಎಂದು ಮೈಬಿಲ್ಡ್-22ರ ಅಧ್ಯಕ್ಷ ಮಹಾಬಲೇಶ್ವರ ಬೈರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಸು ಪ್ರದರ್ಶನದಲ್ಲಿ ವಿನೂತನ ಕಟ್ಟಡ ಸಾಮಗ್ರಿ, ನವೀನ ಜೀವನ ಶೈಲಿಯ ವಸ್ತುಗಳು ಹಾಗೂ ಸಮೂಹ ವಸತಿ ಯೋಜನೆಗಳ ಪ್ರದರ್ಶನ ಜನತೆಗೆ ಕಟ್ಟಡ ನಿರ್ಮಾಣದಲ್ಲಿ ಇತ್ತೀಚಿನ ಆವಿಷ್ಕಾರಗಳನ್ನು ಪರಿಚಯ ಮಾಡಿಕೊಡಲಾಗುವುದು ಎಂದರು.
ವಸ್ತುಪ್ರದರ್ಶನದಲ್ಲಿ ಸೌರಶಕ್ತಿ, ವಿದ್ಯುತ್ ಉಪಕರಣಗಳು, ಕಟ್ಟಡ ನಿರ್ವಾಣದ ಯಂತ್ರಗಳು, ಜಲಸಂರಕ್ಷಣಾ ವಿಧಾನಗಳು, ನವೀನ ಮಾದರಿಯ ನೆಲಹಾಸುಗಳು, ಅಡುಗೆ ಮನೆ ಮತ್ತು ಸ್ನಾನದ ಮನೆಯ ಅಲಂಕಾರಿಕ ಸಾಮಗ್ರಿ, ವಿಶೇಷ ರೀತಿಯ ಛಾವಣಿ, ಹೊರಾಂಗಣ ನೆಲಹಾಸು, ನವೀನ ರೀತಿಯ ಬಣ್ಣ ಮತ್ತು ಸಾಮಗ್ರಿ, ದೇಶ ಮತ್ತು ವಿದೇಶಗಳ ಕಟ್ಟಡ ಮಾದರಿಯ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಐದು ದಿನಗಳ ಕಾಲ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ವಸ್ತುಪ್ರದರ್ಶನ ಇರಲಿದೆ. ನಿತ್ಯ ಸಂಜೆ 6.30 ರಿಂದ 8.30ರವರೆಗೆ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮಾಹಿತಿಗೆ ಮೊ.9448052559, 9448434061 ಸಂಪರ್ಕಿಸಬಹುದು ಎಂದು ವಿವರಿಸಿದರು.
ಅಸೋಸಿಯೇಷನ್‌ನ ಮೈಸೂರು ಅಧ್ಯಕ್ಷ ಆರ್.ರಘುನಾಥ್, ಕಾರ್ಯದರ್ಶಿ ವಿ. ಶ್ರೀನಾಥ್, ಮೈ ಬಿಲ್ಡ್-22ರ ಗೌರವ ಕಾರ್ಯದರ್ಶಿ ಕೆ.ಟಿ.ಗೋವಿಂದರಾಜು ಇದ್ದರು.