ಜಿಲ್ಲೆ

ಡಿ.31 ರಂದು ಚಾ.ನಗರ ಬಂದ್‌ಗೆ ಕರೆ

ಚಾಮರಾಜನಗರ: ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿಶ್ ಷಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದಲಿತ, ರೈತ, ಕನ್ನಡ ಮತ್ತು ಪ್ರಗತಿ ಪರ ಸಂಘಟನೆಗಳು ಡಿ.31 ರಂದು ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ನಡೆಸಲು ತೀರ್ಮಾನಿಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಸಂಘಟನೆಗಳ ಮುಖಂಡರು ಮಾತನಾಡಿ, ಡಿ. 31 ರಂದು ಚಾಮರಾಜನಗರ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲದೇ ವರ್ತಕರು ಇತರೇ ಸಂಘಟನೆಗಳು ಬಂದ್‌ಗೆ ಹೆಚ್ಚಿನ ಸಹಕಾರ ನೀಡಬೇಕು. ರಾಷ್ಟ್ರಪತಿ ಗಮನ ಸೆಳೆಯಲು, ಈ ಬಂದ್ ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದರು. ಸಭೆಯಲ್ಲಿ ಎಸ್‌ಡಿಪಿಐನ ನಗರಸಭಾ ಸದಸ್ಯ ಎಂ.ಮಹೇಶ, ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿ.ಎಂ.ಶಿವಣ್ಣ, ಯ. ನಾಗರಾಜು, ಲಾರಿ ಮಾಲೀಕರ ಸಂಘದ ಇರ್ಷಾದ್, ರಾಮಸಮುದ್ರ ಸುರೇಶ್ ಮಾತನಾಡಿ, ಸ್ವಯಂ ಪ್ರೇರಿತ ಚಾಮರಾಜನಗರ ಬಂದ್‌ಗೆ ನಮ್ಮೆಲ್ಲರ ಬೆಂಬಲ ಇದೆ ಎಂದರು.

ಈ ಸಂದರ್ಭದಲ್ಲಿ ಮುಖಂಡ ವೆಂಕಟರಮಣಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಕೂಡಲೇ ಅಮಿತ್ ಷಾ ವಿರುದ್ದ ಉಗ್ರವಾದ ಕ್ರಮ ಕೈಗೊಂಡು ಬಹಿರಂಗವಾಗಿ ದೇಶದ ಕ್ಷಮೆಯಾಚಿಸಬೇಕು. ಇದರ ಹೊರತಾಗಿ ಮುಂದೆಯು ಸಹ ಇದರ ವಿರುದ್ಧ ಉಗ್ರ ಹೋರಾಟಗಳು ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.

ಚಾಮರಾಜನಗರ ಬಂದ್‌ಗೆ ವರ್ತಕರ ಸಂಘ, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಚಿತ್ರಮಂದಿರ ಮಾಲೀಕರು, ಬಸ್ ಮಾಲೀಕರು ಚಾಲಕರ ಸಂಘ, ಆಟೋ ಮಾಲೀಕರು ಹಾಗೂ ಚಾಲಕರ ಸಂಘ, ಕಾರು ಮಾಲೀಕರು, ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಗೂಡ್ಸ್ ಮಾಲೀಕರ, ಚಾಲಕರ ಸಂಘ, ಹೋಟೆಲ್ ಮಾಲೀಕರು, ಚಿತ್ರಮಂದಿರಗಳ ನೌಕರರು, ಪಟ್ಟಣದ ಎಲ್ಲಾ ಕೋಮಿನ ಯಜಮಾನರು, ಸಮುದಾಯದವರು ಹಾಗೂ ಸಂಘ-ಸಂಸ್ಥೆಗಳ ಮುಖಂಡರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಅವರು ಸಕರತ್ಮಾಕವಾಗಿ ಸ್ಪಂದಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ನಡೆಸಲು ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಯಜಮಾನರಾದ ನಾಗರಾಜು, ಮಹದೇವಯ್ಯ, ಶಿವಯ್ಯ, ದಲಿತ ಮುಖಂಡರಾದ ಛಲವಾದಿ ಮಹಾಸಭಾದ ಸೋಮುಸುಂದರ್, ಆಲೂರು ನಾಗೇಂದ್ರ, ಆಟೋ ಉಮೇಶ್, ಜಿಲ್ಲಾ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ರಮೇಶ್ ಸಿದ್ದಯ್ಯನಪುರ, ರಂಗಸ್ವಾಮಿ, ಶಿವಣ್ಣ, ನಂಜುಂಡಯ್ಯ,ರಂಗಸ್ವಾಮಿ, ದಸಂಸ ಬೆಳ್ಳಿಯಪ್ಪ ಹಾಜರಿದ್ದರು.