ಹಾಸನ: ಜಿಲ್ಲೆಯಲ್ಲಿ ಇದೆ ಪ್ರಪ್ರಥಮ ಬಾರಿಗೆ ವಿಶ್ವಮಾನವತೆಯ ಸಂದೇಶ ಸಾರಿದ ಮಹಾನ್ ಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಜನ್ಮ ದಿನದ ಸವಿನೆನಪಿಗಾಗಿ 22ನೇ ಕುವೆಂಪು ನಾಟಕೋತ್ಸವವನ್ನು ಡಿ. 28ರಿಂದ 31ರವರೆಗೆ ಹಾಸನಂಬ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಟಕೋತ್ಸವದ ಸಂಚಾಲಕ ಓಹಿಲೇಶ್ ಲಕ್ಷ್ಮಣ್ ತಿಳಿಸಿದರು.
ರಂಗಕಹಳೆ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ ಕುವೆಂಪು ಅವರ ಜನ್ಮ ದಿನೋತ್ಸವದ ಅಂಗವಾಗಿ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಉಚಿತವಾಗಿ ಈ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರು ನಾಟಕೋತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ. ಹಂಪನಹಳ್ಳಿ ತಿಮ್ಮೇಗೌಡ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ ಗೌಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘವೂ ಸಹಕಾರ ನೀಡಲಿದೆ. ಈ ಕಾರ್ಯಕ್ರಮವು ರಾಜ್ಯದ 13 ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಕೂಡ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಜಿಲ್ಲೆಯ ಜನರು ಈ ನಾಟಕೋತ್ಸವವನ್ನು ಕಣ್ತುಂಬಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಕೆ. ಗಂಗಾಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು.