ಹಾಸನ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ಬೃಹತ್ ಅಧಿವೇಶನ ನಡೆಸಿದ ಹಿನ್ನೆಲೆಯಲ್ಲಿ ಆ ನೆನಪಿಗಾಗಿ ಶತಮಾನೋತ್ಸವ ಕಾರ್ಯಕ್ರಮವನ್ನು ಡಿ.26 ಮತ್ತು 27ರದು ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸಂಪಂಗಿ ಹೇಳಿದರು
ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರು 1924ರ ಡಿ.26ರಂದು ಬೆಳಗಾವಿಯಲ್ಲಿ ಅಧಿವೇಶನ ಮಾಡಿದ್ದರು. ಅದರ ಸವಿನೆನಪಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಡಿ. 26ರಂದು ಎಐಸಿಸಿಯ ವಕಿರ್ಂಗ್ ಕಮಿಟಿ ಸಭೆಯನ್ನು ನಡೆಸಲಾಗುವುದು. 27ರಂದು ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯಿಂದ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವ ಬಗ್ಗೆ ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದ್ದು, ಅದರಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಜೊತೆಗೆ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡನಿಗೂ ತನ್ನದೇ ಆದ ಜವಾಬ್ದಾರಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು
ಈ ವೇಳೆ ಹಾಸನ ತಾಲೂಕು ಉಸ್ತುವಾರಿ ವಿಜಯ್ ಕುಮಾರ್, ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುಖಂಡರಾದ ದೇವರಾಜೆಗೌಡ, ಬನವಾಸೆ ರಂಗಸ್ವಾಮಿ, ತಾರಾಚಂದನ್, ಮುನಿಸ್ವಾಮಿ, ಶಶಿಧರ್, ಜಿ.ಎಸ್ ವಿಶ್ವನಾಥ್, ಮಲ್ಲಿಗೆವಾಳು ದೇವಪ್ಪ, ಅಶೋಕ್ ನಾಯಕರಹಳ್ಳಿ, ಕಬ್ಬಳಿ ರಾಮಚಂದ್ರ, ನಾಗರಾಜ್, ರಂಜಿತ್, ಅಬ್ದ್ದುಲ್ ಕಯ್ಯುಮ್ ಇತರರು.