ಜಿಲ್ಲೆ

ಡಿ.23 ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಮೇಳ

ಬಾಗಲಕೋಟೆ: ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಡಿಸೆಂಬರ 23 ರಂದು ನವನಗರದ ಕಲಾಭವನದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಮತ್ತು ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು 2023ನೇ ವರ್ಷವನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತಿದ್ದು, 2024 ಜನವರಿ 5 ರಿಂದ 7 ವರೆಗೆ ಅಂತರರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನವದೆಹಲಿಯ ಕರ್ನಾಟಕ ವಿಶೇಷ ಪ್ರತಿನಿಧಿ-2 ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ.

ಮಧ್ಯಾಹ್ನ 12 ರಿಂದ ಸಂಜೆ 4 ವರೆಗೆ ಸಿರಿಧಾನ್ಯ ಸಂಸ್ಕರಣೆ, ಮೌಲ್ಯಸರಪಳಿ ಕುರಿತು ಉತ್ಪಾದಕರು-ಮಾರುಕಟ್ಟೆದಾರರ ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನ 2.30 ರಿಂದ ಸಂಜೆ 5 ವರೆಗೆ ತಾಂತ್ರಿಕ ವಿಚಾರಗಳು ನಡೆಸಲಾಗುತ್ತಿದೆ. ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಗಳ ಉತ್ಪಾದನೆ ತಾಂತ್ರಿಕತೆಗಳ ಕುರಿತು ವಿಜಯಪುರದ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ.ಎ.ಪಿ.ಬಿರಾದಾರ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಮಹತ್ವ ಮತ್ತು ಬಳಕೆ ಕುರಿತು ಡಾ.ಕಾಶಿನಾಬಾಯಿ ಬ್ಯಾಡಗಿ, ಕೃಷಿ ಉತ್ಪನ್ನಗಳ ಕೋಯ್ಲೋತ್ತರ ಮಾರುಕಟ್ಟೆ ಸಂಪರ್ಕ ಕುರಿತು ಈರಣ್ಣ ರೊಟ್ಟಿ ತಾಂತ್ರಿಕ ಗೋಷ್ಠಿ ನಡೆಯಲಿದೆ. ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಧರಿಯಪ್ಪ ಕಿತ್ತೂರ ಅವರು ಸಾವಯವ ಕೃಷಿ ಕುರಿತು ರೈತರ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.