ಜಿಲ್ಲೆ

ಡಿ.20, 21 ರಂದು ಮುರ್ಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ
ಡಿಸೆಂಬರ್ 20 ಹಾಗೂ 21 ರಂದು ಮುರ್ಡೇಶ್ವರದಲ್ಲಿ ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಸಭೆ ಆಯೋಜನೆಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ದೇವಸ್ಥಾನದ ಸಭಾಭವನದಲ್ಲಿ ಸಭೆ ನಡೆಯಲಿದ್ದು, ರಾಜ್ಯ ಬಿಜೆಪಿಯ 166 ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಡಿ.20 ರಂದು ಮಧ್ಯಾಹ್ನದಿಂದ ಸಭೆ ಪ್ರಾರಂಭವಾಗಲಿದ್ದು, ಡಿಸೆಂಬರ್ 21 ಕ್ಕೆ ಸಭೆ ಮುಕ್ತಾಯವಾಗಲಿದೆ. ಪಕ್ಷದ ಪದಾಧಿಕಾರಿಗಳ ಜತೆಗೆ ವಿವಿಧ ಸಚಿವರು, ಜಿಲ್ಲೆಯ ಎಲ್ಲ ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಯ ವಿಚಾರಗಳನ್ನೂ ನಾವು ಪಕ್ಷದ ಪ್ರಮುಖರ ಗಮನಕ್ಕೆ ತರ ಬಯಸುತ್ತೇವೆ ಎಂದರು. ಸಭೆಯನ್ನು ಯಶಸ್ವಿ ಮಾಡುವ ಸಲುವಾಗಿ ಜಿಲ್ಲಾ ಬಿಜೆಪಿ ತಂಡ ಸಜ್ಜಾಗಿದೆ. ವಸತಿಗೆ 80 ರಿಂದ 100 ರೂಂಗಳನ್ನು ಸಿದ್ಧ ಮಾಡಲಾಗಿದೆ ಎಂದು ವಿವರಿಸಿದರು.ಪಕ್ಷದ ಪದಾಧಿಕಾರಿಗಳಾದ ಎನ್.ಎಸ್.ಹೆಗಡೆ, ಉಷಾ ಹೆಗಡೆ, ನಾಗರಾಜ ನಾಯಕ, ಮನೋಜ ಭಟ್, ನಾಗೇಶ ಕುರ್ಡೇಕರ್,ಸುಭಾಷ ಗುನಗಿ, ಪ್ರಕಾಶ ಪಿ.ನಾಯ್ಕ, ರೇಷ್ಮಾ ಮಾಳ್ಸೇಕರ್ ಸುದ್ದಿಗೋಷ್ಠಿಯಲ್ಲಿದ್ದರು.