ಮೈಸೂರು: ನಾನು ಡಾಕ್ಟರ್ ಆಗಿದ್ದರೆ ಸಿಎಂ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ತಮ್ಮ ಹಳೇ ನೆನಪುಗಳನ್ನು ಬಿಚ್ಚಿಟ್ಟರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದ ಲಾಂಛನ ಅನಾವರಣ, ಕೆ.ಆರ್. ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ನವೀಕರಣಗೊಂಡ ಕಟ್ಟಡ ಮತ್ತು ರೇಡಿಯಾಲಜಿ ವಿಭಾಗದ ಎಂಆರ್‌ಐ ಯಂತ್ರೋಪಕರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಓದುತ್ತಿದ್ದ ನಾನು ಪಕ್ಕದಲ್ಲಿ ಇರುವ ಮೈಸೂರು ವೈದ್ಯಕೀಯ ಕಾಲೇಜಿನ ಕ್ಯಾಂಟೀನ್‌ಗೆ ಬರುತ್ತಿದ್ದೆ. ನನಗೂ ಡಾಕ್ಟರ್ ಆಗಿ ಏಪ್ರಾನ್ ಹಾಕೊಂಡು, ಸ್ಟೆಥಸ್ಕೋಪ್ ಕುತ್ತಿಗೆಗೆ ಹಾಕಿಕೊಂಡು ಓಡಾಡಬೇಕು ಎಂಬ ಆಸೆ ಇತ್ತು. ಆದರೆ, ಈ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲ. ಎಂಎಸ್ಸಿ(ಸಸ್ಯಶಾಸ್ತ್ರ) ಸೀಟು ಸಹ ದೊರೆಯಲಿಲ್ಲ. ಆಗ ಬಹಳ ನಿರಾಸೆಯಾಗಿತ್ತು. ಬಳಿಕ ಕಾನೂನುಶಾಸ್ತ್ರ ಕಲಿತು ರಾಜಕೀಯಕ್ಕೆ ಬಂದೆ ಎಂದರು.
ಒಂದು ವೇಳೆ ನಾನು ಡಾಕ್ಟರ್ ಆಗಿದ್ದರೆ ರೋಗಿಗಳಿಗೆ ಔಷಧ ಕೊಟ್ಟುಕೊಂಡೇ ಇರಬೇಕಿತ್ತು. ಸಿಎಂ ಆಗಿ ಇಲ್ಲಿಯವರೆಗೆ ಬರಲು ಆಗುತ್ತಿರಲಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.
ಕೆ.ಆರ್. ಆಸ್ಪತ್ರೆಯಲ್ಲಿ 3 ದಿನದಲ್ಲೇ ವಾಸಿ:
1967ರಲ್ಲಿ ಕಾಯಿಲೆಯಿಂದ ಒಂದು ತಿಂಗಳ ಕಾಲ ಬಳಲಿದ್ದೆ. ಔಷಧ ತೆಗೆದುಕೊಂಡರೂ ವಾಸಿ ಆಗಿರಲಿಲ್ಲ. ಹೀಗಾಗಿ, ಕೆ.ಆರ್. ಆಸ್ಪತ್ರೆಗೆ ಬಂದು ತೋರಿಸಿದೆ. ಕೇವಲ 3 ದಿನದಲ್ಲೇ ರೋಗ ವಾಸಿಯಾಯಿತು ಎಂದು ಸ್ಮರಿಸಿದ ಸಿಎಂ, ಕಾಯಿಲೆ ವಿಶ್ಲೇಷಣೆ ಮಾಡಿ, ಕಾರಣ ಪತ್ತೆಹಚ್ಚಿ, ಸೂಕ್ತ ಔಷಧ ಕೊಟ್ಟು ಗುಣಪಡಿಸಬೇಕು. ಆದರೆ, ರೋಗಿಗಳ ಮೇಲೆ ಪ್ರಯೋಗ ಮತ್ತು ದೋಷ ವಿಧಾನ ಬಳಕೆ ಸರಿಯಲ್ಲ ಎಂದರು.