ಜಿಲ್ಲೆ

ಡಾ.ಸುಶೀಲಮ್ಮಗೆ ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ

ಬಸವಕಲ್ಯಾಣ: ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರದಿಂದ ೨೦೨೩ನೇ ವರ್ಷದ ಶರಣ ವಿಜಯ ರಾಷ್ಟ್ರಿಯ ಪುರಸ್ಕಾರವನ್ನು ನಿರ್ಗತಿಕರ ನಿರಾಶ್ರಿತರ ಮತ್ತು ಆರ್ಥಿಕವಾಗಿ ದುರ್ಬಲ ಮಹಿಳೆಯರ ಸೇವೆ ಮಾಡುತ್ತಿರುವ ಬೆಂಗಳೂರು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಡಾ.ಎಸ್.ಜಿ ಸುಶಿಲಮ್ಮ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ನಗರದ ಹರಳಯ್ಯನವರ ಗವಿಯಲ್ಲಿ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆಯಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಬಸವ ತತ್ವಕ್ಕೆ ಮುಂದೆ ಭವಿಷ್ಯವಿದೆ. ನಾವೆಲ್ಲ. ತನು ಮನ ಧನದಿಂದ ತತ್ವಕ್ಕಾಗಿ ಸೇವೆ ಮಾಡಬೇಕು ಎಂಬ ಭಾವ ಅಂತಗದಲ್ಲಿ ಬಂದಾಗ ವಿಶ್ವಕ್ಕೆ ತಲುಪುತ್ತದೆ ಎಂದು ನುಡಿದರು.

ನೇತೃತ್ವ ವಹಿಸಿದ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಕಲ್ಯಾಣ ರಾಜ್ಯದ ಕನಸು ನನಸಾಗುವ ದಿನ ದೂರವಿಲ್ಲ. ಕಲ್ಯಾಣದ ನಾಡು ಹಬ್ಬ ಮುಂದೆ ವಿಶ್ವದ ಹಬ್ಬವಾಗಲಿದೆ. ಸಮಾನತೆ, ಕಾಯಕ, ದಾಸೋಹ ತತ್ತ್ವಗಳನ್ನು ಮೈಗೂಡಿಸಿಕೊಂಡು ಶರಣ ಸಮಾಜ ನಿರ್ಮಿಸಬೇಕು ಎಂದರು.

ಬಸವಬೆಳವಿಯ ಶ್ರೀ ಶರಣಬಸವ ಸ್ವಾಮೀಜಿ ಅನುಭಾವ ನೀಡಿ, ಕಲ್ಯಾಣ ಕ್ರಾಂತಿ ಮೂಲಪುರುಷ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಕಾಲದ ಔಚಿತ್ಯಪೂರ್ಣವಾಗಿದೆ. ಮಾನವೀಯ ಮೌಲ್ಯಗಳಿಗಾಗಿ ಶರಣರು ಹುತಾತ್ಮರಾದರು. ಬಸವಾದಿ ಪ್ರಮಥರು ಧ್ವನಿಯಿಲ್ಲದವರಿಗೂ ಧ್ವನಿಯಾದರು. ಸದ್ಗುಣಗಳು ನಮ್ಮನ್ನು ಆಳಬೇಕು ಎಂದರು.

ಪುರಸ್ಕಾರ ಸ್ವೀಕರಿಸಿ ಬೆಂಗಳೂರು ಸುಮಂಗಲಿ ಸೇವಾಶ್ರಮದ ಅಧ್ಯಕ್ಷ ಡಾ. ಎಸ್.ಜಿ.ಸುಶೀಲಮ್ಮ ಮಾತನಾಡಿ. ಶರಣರು ನಡೆದಾಡಿದ ನೆಲದ ಮಣ್ಣು ಪವಿತ್ರವಾಗಿದೆ. ಈ ನೆಲದ ಮಣ್ಣನ್ನು ದೆಹಲಿಯ ಗಾಂಧಿ ಸ್ಮಾರಕದಲ್ಲಿ ಇಡಲಾಗುವುದು. ವಿಶ್ವವ್ಯಾಪಿಯಾದ ಬಸವಣ್ಣನವರ ಕಾರ್ಯ ಅನುಭವಕ್ಕೆ ತಂದುಕೊಳ್ಳಬೇಕು ಎಂದರು.

ಶ್ರೀ ಶಿವಾನಂದ ಸ್ವಾಮೀಜಿ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಪ್ರಭುಲಿಂಗ ಮಹಾಗಾಂವಕರ, ಉದ್ಯಮಿ ಕಾವೇರಿ ಪಾಟೀಲ್, ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ್, ಬಸವರಾಜ ಬಾಲಿಕಿಲೆ, ಅಮರನಾಥ ಸೋಲಪುರೆ ಇತರರಿದ್ದರು. ಶಿವಕುಮಾರ ಬಿರಾದಾರ ಸ್ವಾಗತಿಸಿದರು. ಜ್ಯೋತಿ ತೂಗಾಂವೆ ನಿರೂಪಣೆ ಮಾಡಿದರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ವಚನ ಸಂಗೀತ ನಡೆಸಿಕೊಟ್ಟರು.