ಅರಸೀಕೆರೆ : ತಾಲೂಕು ಆಡಳಿತ,ಶಿಕ್ಷಣ ಇಲಾಖೆ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ವತಿಯಿಂದ ನಗರದ ಹೊರವಲಯದಲ್ಲಿರುವ ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಶನಿವಾರ ಡಾ.ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನಾಚರಣೆ ಆಯೋಜಿಸಲಾಗಿತ್ತು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸರ್ಕಾರದ ಹಂತದಲ್ಲಿ ಶಿಕ್ಷಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ.ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಹಳೆ ಗುರುಭವನ ತೆರವುಗೊಳಿಸಿದರೆ ಸುಸಜ್ಜಿತ ಭವನ ನಿರ್ಮಿಸಿಕೊಡಲು ಬದ್ಧನಿದ್ದೇನೆ ಎಂದು ಭರವಸೆ ನೀಡಿದರು.ತಹಸೀಲ್ದಾರ್ ವಿಭಾ ವಿ ರಾಥೋಡ್ ಮಾತನಾಡಿ ಶಿಕ್ಷಕ ಸಮುದಾಯ ಹೊಸ ಬದಲಾವಣೆಗೆ ತೆರೆದುಕೊಂಡು ದೇಶದ ಪ್ರಗತಿಗೆ ಕೈಜೋಡಿಸಬೇಕು. ಜತೆಗೆ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ತತ್ವ, ಆದರ್ಶ,ಚಿಂತನೆಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜು, ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಉಪಾಧ್ಯಕ್ಷ ಕಾಂತೇಶ್, ಬಿಇಒ ಮೋಹನ್ ಕುಮಾರ್ ಸೇರಿ ಹಲವರು ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನ ಕುಮಾರ್,ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್,ಬಿಆರ್‌ಸಿ ಶಂಕರ್ ಸೇರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಗೌರವಿಸಲಾಯಿತು.