ಹಾಸನ: ತ್ರಿವಿಧ ದಾಸೋಹದ ಮೂಲಕ ಕೋಟ್ಯಂತರ ಮಕ್ಕಳಿಗೆ ಬೆಳಕಾದ ಸುತ್ತೂರು ಶ್ರೀ ಮಠದ ಪರಮ ಪೂಜ್ಯ ಜಗದ್ಗುರುಗಳಾದ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸೇವೆ ಬಡಮಕ್ಕಳಿಗೆ ಆಶಾಕಿರಣವಾಗಿದೆ. ಉಚಿತ ಶಿಕ್ಷಣ, ವಸತಿ, ಊಟ ನಿಡುವ ಮೂಲಕ ವಿಧ್ಯಾಭ್ಯಾಸಕ್ಕೆ ಅನೂಕೂಲವಾಗುವಂತಹ ಕೆಲಸ ಮಾಡಿದ್ದಾರೆ ಎಂದು ಹಾಸನದ ತಣ್ಣೀರುಹಳ್ಳ ಮಠದ ಮಠಾಧೀಶರಾದ ಶ್ರೀ ವಿಜಯ ಕುಮಾರ್ ಸ್ವಾಮೀಜಿ ಹೇಳಿದರು.
ಹಾಸನ ತಣ್ಣೀರುಹಳ್ಳ ಮಠದಲ್ಲಿ ಬುಧವಾರ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಪೂಜ್ಯ ಸ್ವಾಮೀಜಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನಪರ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ 109ನೇ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಚಂಗಡಹಳ್ಳಿ ವಿರಕ್ತ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ, ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ತಣ್ಣೀರು ಹಳ್ಳ ಮಠದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ಶಂಕರ್, ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.