ಮೈಸೂರು: ನಟ ಡಾ.ವಿಷ್ಣುವರ್ಧನ್ ನೆನಪಿನಲ್ಲಿ ಉದ್ಯಾನಕ್ಕೆ ನಾಮಕರಣ ಮಾಡಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಮೇಯರ್ ಶಿವಕುಮಾರ್ ಭರವಸೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗಾನ ವೈದ್ಯಲೋಕ ಸಂಸ್ಥೆಯಿಂದ ಭಾನುವಾರ ವಿಷ್ಣುವರ್ಧನ್ ಅವರ 72ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಎಂದೂ ಮರೆಯದ ಹಾಡು’ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನವರೇ ಅದ ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ. ಅವರ ಅಭಿನಯದ ಚಿತ್ರಗಳು ಸಾಮಾಜಿಕ ಕಳಳಿಯನ್ನು ಹೊಂದಿದ್ದಲ್ಲದೇ ಯಾವುದಾದರೊಂದು ಸಂದೇಶವನ್ನು ಸಾರುವಂತಿದ್ದವು. ಅವರ ನೆನಪಿಗಾಗಿ ಗೀತಗಾಯನ ಸಂಜೆ ವೈದ್ಯ ಗಾಯಕರಿಂದ ನಡೆಯುತ್ತಿರುವುದು ಸಂತೋಷದ ಸಂಗತಿ. ಅವರ ಹೆಸರಿನಲ್ಲಿ ಉದ್ಯಾನದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ದೇಶಕ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ವಿಷ್ಣು ಸ್ಮಾರಕಭವನ ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್ ಸಮೀಪ ಪ್ರಗತಿಯಲ್ಲಿದೆ. ಇಲ್ಲಿ ವಿಷ್ಣು ಅವರ ಜೀವನ ಪಯಣದ ಸಮಗ್ರ ಚಿತ್ರಣ ನೋಡುಗರಿಗೆ ದೊರಕಲಿದೆ. ವಿಷ್ಣು ಅವರ ಸಾಧನೆಗೆ ಇನ್ನಷ್ಟು ಪುರಸ್ಕಾರಗಳು ಬರಬೇಕಾಗಿತ್ತಾದರೂ ಅವರ ಜೀವಿತಾವಧಿಯಲ್ಲಿ ಸಾಧ್ಯವಾಗಲಿಲ್ಲ ಎನ್ನುವ ಬೇಸರ, ನೋವಿದೆ ಎಂದು ವಿಷಾದವ್ಯಕ್ತಪಡಿಸಿದರು.
ಹಿರಿಯ ರಂಗ ಕಲಾವಿದ ವೈ.ಎಂ. ಪುಟ್ಟಣ್ಣಯ್ಯ ಅವರು ಮಾತನಾಡಿ, ವಿಷ್ಣುವರ್ಧನ್ ಅವರ ಬಾಲ್ಯ, ಪೂರ್ವಜರ ಒಡನಾಟವನ್ನು ಸ್ಮರಿಸಿಕೊಂಡರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಗಾನ ವೈದ್ಯ ಲೋಕ ಸಂಸ್ಥೆಯ ಗೌರವಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅವರು ವಿಷ್ಣುವರ್ಧನ್ ಬದುಕಿನ ಹಲವು ಆಯಾಮಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಾನ ವೈದ್ಯ ಲೋಕ ಸಂಸ್ಥೆಯ ಅಧ್ಯಕ್ಷ ಡಾ.ಟಿ. ರವಿಕುಮಾರ್, ಡಾ.ಎ.ಎಸ್. ಪೂರ್ಣಿಮಾ, ಡಾ.ಪಿ. ಚಂದ್ರಶೇಖರ್, ಡಾ.ಸುರೇಂದ್ರನ್, ಡಾ.ಶ್ಯಾಮಪ್ರಸಾದ್, ಡಾ.ಶಿವಕುಮಾರ್, ಶ್ರೀಲತಾ ಮನೋಹರ್, ಸಿ.ಎಸ್. ವಾಣಿ ಇತರರು ಇದ್ದರು.