*ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
*ಖಜಾಂಚಿಯಾಗಿ ಎಂ.ಶಿವಕುಮಾರಯ್ಯ, ರಾಜ್ಯ ಪರಿಷತ್ ಸ್ಥಾನಕ್ಕೆ ನಟರಾಜು ಆಯ್ಕೆ
ಚಾಮರಾಜನಗರ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಾ.ರೇಣುಕಾದೇವಿ ಬಣದವರು ಭರ್ಜರಿ ಜಯ ಸಾಧಿಸಿದರು.
ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯಿಂದಲೇ ಜಿಲ್ಲಾಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಿತು. ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಹಾಗೂ ಚುನಾವಣೆ ಮೂಲಕ ಅಯ್ಕೆಯಾಗಿದ್ದ 65 ನಿರ್ದೇಶಕರು ಮತದಾನ ಮಾಡಿದರು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರೋಗ್ಯ ಇಲಾಖೆಯ ಚಂದ್ರಶೇಖರ್ ಅವರು 28 ಮತಗಳನ್ನು ಪಡೆದರೇ, ಡಾ.ರೇಣುಕಾದೇವಿ ಅವರು 37 ಮತಗಳನ್ನು ಪಡೆದುಕೊಳ್ಳುವ ಮೂಲಕ 4 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದರು.
ಜಿಲ್ಲಾ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ರಕ್ಷೀತ್ ಕುಮಾರ್ 29 ಮತಗಳನ್ನು ಪಡೆದರೇ, ಎಂ.ಶಿವಕುಮಾರಯ್ಯ 37 ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾದರು. ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜು 26 ಮತಗಳನ್ನು ಗಳಿಸಿದರೇ, ನಟರಾಜ್ 36 ಮತಗಳನ್ನು ಪಡೆದುಕೊಳ್ಳುವ ಮೂಲಕ ವಿಜಯದ ಮಾಲೆ ಧರಿಸಿದರು. ಈ ಮೂಲಕ ಬಹಳ ಕುತೂಹಲವನ್ನು ಕೆರಳಿಸಿದ್ದ ರಾಜ್ಯ ಸರ್ಕಾರಿ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವೈದ್ಯರಾದ ರೇಣುಕಾದೇವಿ ಅವರು ಜಯಗಳಿಸುವ ಮೂಲಕ ಪ್ರಪ್ರಥಮವಾಗಿ ಮಹಿಳೆಯೊಬ್ಬರು ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಕೀರ್ತಿ ಭಾಜನರಾಗಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನ ಪಡೆದ ಪ್ರಥಮ ಮಹಿಳೆ:
ರಾಜ್ಯದಲ್ಲೇ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನವನ್ನು ಮಹಿಳೆಯೊಬ್ಬರು ಪ್ರಪ್ರಥಮವಾಗಿ ಅಲಂಕರಿಸಿದ್ದಾರೆ. ಈ ವರೆಗೂ ಸರ್ಕಾರಿ ನೌಕರರ ಸಂಘಕ್ಕೆ ಎಲ್ಲೂ ಕೂಡ ಮಹಿಳೆಯರು ಅಧ್ಯಕ್ಷರಾಗಿರಲಿಲ್ಲ. ಜಿಲ್ಲೆಯಲ್ಲೂ ಪ್ರಥಮ ಬಾರಿಗೆ ಮಹಿಳೆಯೊಬ್ಬರು, ಅದರಲ್ಲೂ ದಲಿತ ಮಹಿಳೆಯೊಬ್ಬರು ಅಧ್ಯಕ್ಷರಾಗುವ ಮೂಲಕ ಗಮನ ಸೆಳೆದಿದ್ದಾರೆ. ಹಾಗೇ ವೈದ್ಯರೊಬ್ಬರು ಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗುತ್ತಿರುವುದು ಕೂಡ ಇದೇ ಮೊದಲು ಎಂಬುದು ಗಮನಾರ್ಹ ವಿಷಯವಾಗಿದೆ.
ನೌಕರರಿಂದ ಸಂಭ್ರಮಾಚರಣೆ:
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರೇಣುಕಾದೇವಿ, ಖಜಾಂಚಿಯಾಗಿ ಆಯ್ಕೆಯಾದ ಎಂ.ಶಿವಕುಮಾರಯ್ಯ, ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆಯಾದ ನಟರಾಜ್ ಅವರನ್ನು ಬೆಂಬಲಿಗ ನೌಕರರು ಹಾರಿ ತುರಾಯಿ ಹಾಕಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು. ಈ ವೇಳೆ ಹಲವಾರು ನಿರ್ದೇಶಕರು ಹಾಗೂ ಹಿತೈಷಿಗಳು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ನೌಕರರ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆಮಾಡಿದ ಎಲ್ಲಾ ನೌಕರ ವರ್ಗಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದು ತಂಡವಾಗಿ ಉತ್ತಮ ಕೆಲಸ ನಿರ್ವಹಿಸುತ್ತೇವೆ.
-ಡಾ.ರೇಣುಕಾದೇವಿ, ನೂತನ ಜಿಲ್ಲಾಧ್ಯಕ್ಷೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಚಾಮರಾಜನಗರ.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿ 5 ವರ್ಷ ಉತ್ತಮ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆಯ ಆಧಾರದ ಮೇಲೆ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿತ್ತು.
-ಚಂದ್ರಶೇಖರ್, ಪರಾಜಿತ ಅಭ್ಯರ್ಥಿ