ಚಿತ್ರದುರ್ಗ: ಈಡಿಗ ಸಮುದಾಯ ಡಾ.ರಾಜ್‌ಕುಮಾರ್, ಡಾ.ಪುನೀತ್ ರಾಜ್‌ಕುಮಾರ್, ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಆದರ್ಶ ಮೈಗೂಡಿಸಿಕೊಂಡು ಸಮಾಜದಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಸಲಹೆ ನೀಡಿದರು.
ಈಡಿಗರ ವಿದ್ಯಾರ್ಥಿನಿಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಈಡಿಗರ ಸಂಘದ ಪದಾಧಿಕಾರಿಗಳ ಪದಗ್ರಹಣ, ಸರ್ಕಾರಿ ಸೇವೆಯಲ್ಲಿರುವ, ನಿವೃತ್ತಿ ಹೊಂದಿದ ಸಮಾಜದ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈಡಿಗ ಸಣ್ಣ ಸಮುದಾಯವಾಗಿದ್ದು, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದೀರಿ. ಆದರೆ, ಈವರೆಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲರಾಗಿದ್ದೀರಿ. ಇನ್ನಾದರೂ ಎಚ್ಚೆತ್ತುಕೊಂಡು ಸೌಕರ್ಯ ಪಡೆಯಲು ಮುಂದಾಗಿ ಎಂದು ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷ ಎಚ್.ಓ.ಜಗದೀಶ್ ಮಾತನಾಡಿ, ಸಮುದಾಯದ ಬಡ ಕುಟುಂಬಗಳಿಗೆ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗುವ ಅನುದಾನ ಕೊಡಿಸಲು ಸಂಘ ನಿರಂತರವಾಗಿ ಶ್ರಮಿಸುತ್ತದೆ ಎಂದರು.
ನಗರದ ಯಾವುದಾದರೂ ವೃತ್ತಕ್ಕೆ ಡಾ.ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಬೇಕು. ಭರಮಸಾಗರದಲ್ಲಿ ಸಮಾಜದ ಸಮುದಾಯ ಭವನ ನಿರ್ಮಿಸಲು ಒಂದು ಎಕರೆ ಜಾಗ ನೀಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತಾ, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಸಂಘದ ಉಪಾಧ್ಯಕ್ಷ ಸಿ.ರಮೇಶ್, ಪ್ರಕಾಶ್, ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್.ಕುಮಾರಸ್ವಾಮಿ, ನಾಗೇಂದ್ರಪ್ರಸಾದ್ ಇತರರಿದ್ದರು.