ಜಿಲ್ಲೆ

ಡಾ.ಬಿ.ಸಿ.ರಾಯ್ ಅವರಿಂದ ವೈದ್ಯಕೀಯ ಕ್ಷೇತ್ರಕ್ಕೆ ಭದ್ರ ಬುನಾದಿ

ಮೈಸೂರು: ದೇಶದ ಸ್ವಾತಂತ್ರೃ ಹೋರಾಟದಲ್ಲೂ ಭಾಗವಹಿಸಿದ್ದ ಡಾ.ಬಿ.ಸಿ.ರಾಯ್ ಅವರು ದೇಶದ ಸಂಘಟಿತ ವೈದ್ಯಕೀಯ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು ಎಂದು ಸಿಗ್ಮಾ ಆಸ್ಪತ್ರೆಯ ನಿರ್ದೇಶಕ ಡಾ.ಜಿ.ಸಿದ್ದೇಶ್ ಬಣ್ಣಿಸಿದರು.
ವೈದ್ಯರ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿಗೆ ಒಂದು ಘನತೆಯನ್ನು ತಂದು ಕೊಟ್ಟ ರಾಯ್ ಅವರು, ಭಾರತೀಯ ವೈದ್ಯ ಸಂಘ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಸ್ಥಾಪಿಸುವುದರಲ್ಲೂ ಮುಖ್ಯ ಪಾತ್ರ ವಹಿಸಿದ್ದರು. ಇವರ ಸೇವೆ ಪರಿಗಣಿಸಿದ ಸರ್ಕಾರ ಅವರ ಜನ್ಮ ದಿನವಾದ ಜುಲೈ ಒಂದನ್ನು ವೈದ್ಯರ ದಿನವನ್ನಾಗಿ ಆಚರಿಸುವ ಮೂಲಕ ಸದಾ ನೆನೆಯುವಂತೆ ಮಾಡುತ್ತಿದೆ ಎಂದು ಹೇಳಿದರು.
ಇಂದಿನ ವೈರಾಣು ಯುಗದಲ್ಲಿ ಎಲ್ಲ ವೈದ್ಯರಿಗೆ ಹೊಸ ಸವಾಲುಗಳನ್ನು ಎದುರಿಸಿ ಸೇವೆ ಮುಂದುವರಿಸುವುದಕ್ಕೆ ಶಕ್ತಿ ಮತ್ತು ಧೈರ್ಯ ಸಿಗಲಿ ಮತ್ತು ವೈದ್ಯರು ತಮ್ಮ ಹಾಗೂ ಕುಟುಂಬದವರ ಆರೋಗ್ಯದ ಕಡೆಯು ಸಹ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಮತ್ತೊಬ್ಬ ನಿರ್ದೇಶಕಿ ಡಾ.ರಾಜೇಶ್ವರಿ ಮಾದಪ್ಪ ಮಾತನಾಡಿ, ಜನರ ಜೀವನಶೈಲಿ ಬದಲಾಗಿದೆ, ವೈದ್ಯರ ಜೀವನಶೈಲಿ ಸುಧಾರಣೆ ಆಗಿಲ್ಲ. ಅದಕ್ಕೆ ಕಾರಣ ದೇಶದಲ್ಲಿ ಜನಸಂಖ್ಯೆ ಜಾಸ್ತಿ ಮತ್ತು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಕಾಯಿಲೆಗಳು ಕೂಡ ಜಾಸ್ತಿಯಾಗಿದೆ. ಜನರು ವೈದ್ಯರ ಮೇಲೆ ಜಾಸ್ತಿ ಒತ್ತಡ ಹಾಕಬಾರದು. ಯಾಕೆಂದರೆ ವೈದ್ಯರಿಗೂ ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ ಮತ್ತು ಮಾನಸಿಕ ಸಾಂತ್ವನ ಕೂಡ ಬೇಕಾಗುತ್ತದೆ. ಜನಸಾಮಾನ್ಯರು ಇದನ್ನು ತಿಳಿದುಕೊಂಡು ವೈದ್ಯರೊಂದಿಗೆ ಧನ್ಯತಾ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಕೋರಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜ್ಞಾನಶಂಕರ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಇರುವ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದರು.
ಆಸ್ಪತ್ರೆಯ ನಿರ್ದೇಶಕರಾದ ಡಾ. ಕೆ.ಎಂ. ಮಾದಪ್ಪ, ಡಾ. ಅಂಜಲಿ ಸಿದ್ದೇಶ್, ಡಾ. ಕೆ ಎನ್.ಸೋಮಣ್ಣ, ಡಾ.ಗೌರಿ ಎಸ್.ಹುಕ್ಕೇರಿ, ಡಾ. ಅನಿಕೇತ್ ಪ್ರಭಾಕರ್, ಆಸ್ಪತ್ರೆಯ ಕರ್ತವ್ಯನಿರತ ವೈದ್ಯರು, ಸಿಬ್ಬಂದಿ ಎಚ್.ಆರ್.ನಿರೀಕ್ಷಾ, ದಮಯಂತಿ, ಮಾರ್ಕೆಟಿಂಗ್ ಈರಪ್ಪ, ಮಹದೇವಯ್ಯ, ಚೇತನ್ ಇತರರು ಇದ್ದರು.