ಬೇಲೂರು: ದೇದ ಸರ್ವರಿಗೂ ಸಮಾನ ಹಕ್ಕು ಅವಕಾಶಗಳನ್ನು ಸಂವಿಧಾನದ ಮೂಲಕ ನೀಡಿದ ಡಾ. ಬಿ.ಆರ್.ಅಂಬೇಡ್ಕರ್‌ರವರ ಹೆಸರಿನಲ್ಲಿ ನಿರ್ಮಿಸಿರುವ ಸಮುದಾಯ ಭವನ ಉತ್ತಮ ಕೆಲಸಕ್ಕೆ ಬಳಕೆಯಾಗಲಿ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲೂಕಿನ ಮೋಗಸಾವರ ಗ್ರಾಮದಲ್ಲಿ ಶನಿವಾರ 16 ಲಕ್ಷ ವೆಚ್ಚದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಅವಕಾಶಗಳನ್ನು ಕಲ್ಪಿಸಿಕೊಟ್ಟವರು ಡಾ.ಅಂಬೇಡ್ಕರ್‌ರವರು. ಅವರು ತೋರಿದ ಹಾದಿಯಲ್ಲಿ ನಾವೆಲ್ಲರೂ ನಡೆದು ನೆಮ್ಮದಿಯ ಸಮಾಜ ನಿರ್ಮಿಸಬೇಕಿದೆ. ಈಗಾಗಲೇ ಬೇಲೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 1800 ಕೋಟಿ ರೂ, ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಗಚಿ ಸೇತುವೆ ಬಳಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉತ್ತಮ ಹಾಸ್ಟೆಲ್ ನಿರ್ಮಿಸಲಾಗುತಿದ್ದು ಶೀಘ್ರ ಉದ್ಘಾಟಿಸಲಾಗುತ್ತದೆ. ಅಲ್ಲದೆ ಬೇಲೂರು ಕ್ಷೇತ್ರದ ಅಭಿವೃದ್ಧಿಗೆ ನನ್ನ ಶಕ್ತಿ ಮೀರಿ ಶ್ರಮಿಸಿದ್ದು ಕರೊನಾ ನಡುವೆಯೂ ನಮ್ಮ ಸರ್ಕಾರವಿಲ್ಲದಿದ್ದರೂ 1800 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸವನ್ನ ಮಾಡಿಸಿದ್ದೇನೆ. ಶಾಸಕರಾದವರು ಜನರ ಸೇವಕನಾಗಿ ಕೆಲಸ ಮಾಡಬೇಕು ಇಲ್ಲಿನ ಜನರ ಮಧ್ಯೆ ಇರಬೇಕು ಆದ್ದರಿಂದ ಸ್ಥಳೀಯರಿಗೆ ತಮ್ಮ ಮತವನ್ನು ಹಾಕುವ ಮೂಲಕ ಆಶೀರ್ವದಿಸಬೇಕು. ಹೊರಗಿನಿಂದ ಬರುವವರನ್ನೂ ನೋಡಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ ನಾನು ಪ್ರತಿನಿತ್ಯ ತಮ್ಮ ಸೇವಕನಾಗಿ ಸುಲಭವಾಗಿ ಸಾರ್ವಜನಿಕರ ಸೇವೆಗೆ ಸಿಗುತ್ತಿದ್ದೇನೆ. ನನ್ನಂತಹ ಶಾಸಕನನ್ನು ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು. ಜತೆಗೆ ಮತದಾನದ ಹಕ್ಕನ್ನು ಕೂಡಾ ಯಾರು ದುರುಪಯೋಗ ಪಡಿಸಿಕೊಳುಬೇಡಿ ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರ ಹೋರಾಟದ ಫಲವಾಗಿ ನಾವುಗಳು ಇಂದು ಇಲ್ಲಿ ಕುಳಿತಿದ್ದೇವೆ. ಅವರು ಹೋರಾಟ ಮಾಡಿ ನಮಗೆ ಸಂವಿಧಾನದಲ್ಲಿ ಹಕ್ಕು, ಅವಕಾಶಗಳನ್ನು ಕೊಡಿದ್ದರೆ ನಾವು ಇಂದು ಕಾಡು ಪ್ರಾಣಿಗಳಿಗಿಂದ ಕೀಳಾಗಿ ಇರಬೇಕಿತ್ತು. ಅವರ ಮುಂದಾಲೋಚನೆಯಿಂದ ನಾವುಗಳೆಲ್ಲರೂ ಜೀವಂತವಿದ್ದೇವೆ. ಅಲ್ಲದೆ ನಾವು ಕೇವಲ ಅಂಬೇಡ್ಕರ್ ಹೆಸರಿನಲ್ಲಿ ಸಂಘ ಸಂಸ್ಥೆ ಕಟ್ಟಿ, ಜಯಂತಿ ಹಬ್ಬ ಮಾಡಿದರೆ ಸಾಲದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತ್ತಾದಾಗ ಮಾತ್ರ ಅಂಬೇಡ್ಕರ್‌ರವರು ಕಂಡ ಕನಸು ನನಸಾಗಲು ಸಾಧ್ಯ ಎಂದರು.
ಬಿಎಸ್ಸಿ ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ್, ಗಾಂಧಾರ ಬುದ್ಧ ವಿಹಾರದ ಉಪಾಧ್ಯಕ್ಷ ಮಂಜುನಾಥ್, ಜಿಪಂ ಮಾಜಿ ಸದಸ್ಯೆ ಇಂದಿರಾ, ಗ್ರಾಪಂ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷೆ ಚಂದ್ರಕಲಾ, ಮುಖಂಡರಾದ ನಾಗೇಶ್, ಅದ್ದೂರಿ ಚೇತನ್ ಕುಮಾರ್, ಸಂಜುಕೌರಿ, ರವಿಚಂದ್ರನ್ ಸೇರಿದಂತೆ ಇತರರಿದ್ದರು.