ಜಿಲ್ಲೆ

ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹ

ಹುಣಸೂರು: ಹುಣಸೂರು ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ದಲಿತ ಸಂಘರ್ಷ ಸಮಿತಿ(ದಸಂಸ)ಯ ಮುಖಂಡರು ಮನವಿ ಸಲ್ಲಿಸಿದರು.


ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ಕಚೇರಿ ಬಳಿ ಗಜಪಯಣಕ್ಕೆ ಚಾಲನೆ ನೀಡಿ ಮೈಸೂರಿಗೆ ತೆರಳುತ್ತಿದ್ದ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ನಗರದ ಸಂವಿಧಾನ ವೃತ್ತದ ಬಳಿ ದಲಿತ ಸಂಘರ್ಷ ಸಮಿತಿ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಹುಣಸೂರು ಉಪವಿಭಾಗ ಕೇಂದ್ರವಾಗಿದ್ದು, ಕಳೆದ 20 ವರ್ಷಗಳಿಂದ ದಲಿತ ಸಂಘಟನೆಗಳು ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಆಳುವವರು ಇತ್ತ ಗಮನಹರಿಸುತ್ತಿಲ್ಲ. ಸಾಮಾಜಿಕ ನ್ಯಾಯದ ಹರಿಕಾರಡಿ.ದೇವರಾಜ ಅರಸು ಹುಟ್ಟಿ ಬೆಳೆದ ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮದ ಅವರ ಮನೆಯು ಶಿಥಿಲಾವಸ್ಥೆಯಲ್ಲಿ ಇದ್ದು, ಅವರ ಮನೆಯನ್ನು ಅರಸು ಜೀವನ ಸಾಧನೆಗಳನ್ನು ಸಾರುವ ಮ್ಯೂಸಿಯಂ ಆಗಿ ಮಾರ್ಪಡಿಸಬೇಕು. ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, 5 ವರ್ಷಗಳೇ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಹಳೆಯ ಕಟ್ಟಡದಲ್ಲಿ ರೋಗಿಗಳು ತೊಂದರೆಗೊಳಗಾಗಿದ್ದಾರೆ. ನೂತನ ಕಟ್ಟಡವನ್ನು ಶೀಘ್ರ ಸಾರ್ವಜನಿಕ ಸೇವೆಗೆ ಸಮರ್ಪಿಸುವ ಕಾರ್ಯವಾಗಬೇಕು. ಆಸ್ಪತ್ರೆಯ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಅರಸು ಕಲಾಭವನ ದಶಕಗಳಿಂದ ಕಾಮಗಾರಿ ನಡೆಯುತ್ತಿದ್ದು, ಇದೀಗ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ಈ ಕೂಡಲೇ ತಾಲೂಕಿನ ಅಭಿವೃದ್ಧಿಗ ಅಗತ್ಯವಾಗಿರುವ ಈ ಎಲ್ಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.


ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಚ್.ಸಿ.ಮಹದೇಪ್ಪ, ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕಿನಲ್ಲೇ ಎಲ್ಲ ಇಲಾಖೆಗಳನ್ನೊಳಗೊಂಡು ಸಭೆಯನ್ನು ಆಯೋಜಿಸುತ್ತೇನೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ದಲಿತ ಮುಖಂಡರಾದ ಬಸವಲಿಂಗಯ್ಯ, ದಸಂಸ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ದೇವೇಂದ್ರ ಕುಳುವಾಡಿ, ಚಿಲ್ಕುಂದ ವೇಣುಗೋಪಾಲ, ಪೌರಕಾರ್ಮಿಕ ಸಮಾಜದ ಮುರುಗೇಶ, ಮಾದು, ನೂರಾರು ದಲಿತ ಮಹಿಳೆಯರು ಇದ್ದರು.