ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿಯಾಗಿದ್ದರು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ 68ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಷಾರ್ಚನೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಮಾನವತಾವಾದಿ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರು.
1891ರ ಏಪ್ರಿಲ್ 14ರಂದು ಜನಿಸಿದ ಬಾಬಾ ಸಾಹೇಬರು ಅಸಮಾನತೆಯೇಮೇಲೈಸುತ್ತಿದ್ದ ಕಾಲದಲ್ಲಿ ತಾನು ಅನುಭವಿಸಿದ ನೋವು, ಯಾತನೆಗಳು ಮುಂದಿನ ಜನಾಂಗಕ್ಕೆ ಸಿಗಬಾರದು
ಅನ್ನುವ ದೃಷ್ಟಿಯಿಂದ ನಿರಂತರವಾಗಿ ಅಧ್ಯಯನ ಮಾಡಿ, ಅಸ್ಪೃಶ್ಯತೆ,ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ನ್ಯಾಯ ಮಂಡನೆ ಮಾಡಿದವರು. ಈ ನೆಲದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಸ್ಪಷ್ಟವಾದ ಅರಿವಿದ್ದ ಪರಿಣಾಮ ದೇಶಕ್ಕೆ ಬಲಿಷ್ಟ ಮತ್ತು ಶ್ರೇಷ್ಟ ಸಂವಿಧಾನವನ್ನು ಜೀವನಪರ್ಯಂತ ಅಭ್ಯುದಯಕ್ಕಾಗಿ ನೀಡಿದ್ದಾರೆ ಎಂದರು.
ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಮಾತನಾಡಿ, ಸರ್ವರಿಗೂ ಸಮಾನತೆ ಅವಕಾಶವನ್ನು ಸಂವಿಧಾನ ದಡಿಯಲ್ಲಿ ನೀಡಿರುವ ಅಂಬೇಡ್ಕರ್ ಅವರ ಆದರ್ಶಗಳು ಪ್ರತಿಯೊಬ್ಬರೂ ಅಳವಡಿಸಿಕೊಂಡಿದರೆ ಅವರ ಕನಸಿನ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೂಡ್ನಾಕೂಡುಪ್ರಕಾಶ್ ಮಾತನಾಡಿ, ದೇಶಕ್ಕೆ ಸಂವಿಧಾನ ಕೊಟ್ಟಂತಹ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಿಲ್ಲ, ಚುನಾವಣೆಯಲ್ಲಿ ನಿಂತು ಸೋಲಿಸಿತು. ಇಂದು ಕಾಂಗ್ರೆಸ್ ಪಕ್ಷವನ್ನು ಸಹಿಸಲಾರದ ದಿನ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಮಾಂಬಳ್ಳಿ ರಾಮಣ್ಣ, ಟಗರಪುರ ರೇವಣ್ಣ, ನಗರ ಮಂಡಲ ಅಧ್ಯಕ್ಷ ಪರಶಿವ, ನಲ್ಲೂರು ಪರಮೇಶ್ವರ, ಡೈವರ್ ಮಹದೇವಯ್ಯ, ವೇಣುಗೋಪಾಲ, ರಾಜಣ್ಣ, ರಾಮಸಮುದ್ರ ಶಿವು, ರಂಗಸ್ವಾಮಿ, ಶ್ರೀನಿವಾಸ, ಮುತ್ತಿಗೆ ಮೂರ್ತಿ, ಹಾಜರಿದ್ದರು.