ಜಿಲ್ಲೆ

ಡಾ.ಪ್ರೀತನ್ ನಾಗಪ್ಪ, ನಿಶಾಂತ್ ನಡುವೆ ಗೌಪ್ಯ ಸಭೆ

ಹನೂರು: ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಸೋಮವಾರ ಬೆಂಬಲಿಗರೊಂದಿಗೆ ನಿಶಾಂತ್ ಕಚೇರಿಗೆ ತೆರಳಿ, ಬೆಂಬಲಿಸುವಂತೆ ನಸಿೆದ ಗೌಪ್ಯ ಸಭೆಯಲ್ಲಿ ನಿಶಾಂತ್ ಹಾಗೂ ಪ್ರೀತನ್ ನಾಗಪ್ಪ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆಯಿತು.


ಬಿಜೆಪಿಯಿಂದ ಈ ಬಾರಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಪುತ್ರ ಡಾ.ಪ್ರೀತನ್ ನಾಗಪ್ಪ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಡಾ.ಎಸ್. ದತ್ತೇಶ್‌ಕುಮಾರ್ ಹಾಗೂ ನಿಶಾಂತ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಡಾ. ಪ್ರೀತನ್ ನಾಗಪ್ಪ ಅವರಿಗೆ ಟಿಕೆಟ್ ದೊರೆತ ಹಿನ್ನೆಲೆಯಲ್ಲಿ ಇನ್ನುಳಿದ ಮೂವರು ಅಸಮಾಧಾನ ವ್ಯಕ್ತಪಡಿಸಿ ದೂರ ಉಳಿದಿದ್ದರು. ಅಲ್ಲದೆ, ಬೆಂಬಲಿಗರಲ್ಲೂ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಡಾ.ಪ್ರೀತನ್ ನಾಗಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿರಲಿಲ್ಲ.


ಈ ದಿಸೆಯಲ್ಲಿ ಪರಿಮಳ ನಾಗಪ್ಪ ಹಾಗೂ ಪುತ್ರ ಪ್ರೀತನ್ ನಾಗಪ್ಪ ಅವರು ಬಿ.ವೆಂಕಟೇಶ್ ಹಾಗೂ ಡಾ.ದತ್ತೇಶ್ ಕುಮಾರ್ ಅವರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಕೋರಿದರೂ ಯಾವುದೇ ಧನಾತ್ಮಕ ಬೆಂಬಲ ಸಿಗಲಿಲ್ಲ ಎನ್ನಲಾಗಿದೆ. ಇತ್ತ ನಿಶಾಂತ್ ಅವರು ಪಕ್ಷದ ಹಿರಿಯ ನಾಯಕರ ಸೂಚನೆ ಮೇರೆಗೆ ಕೊಳ್ಳೇಗಾಲದ ಬಿಜೆಪಿ ಅಭ್ಯರ್ಥಿ ಎನ್. ಮಹೇಶ್ ಅವರ ಚುನಾವಣಾ ಉಸ್ತುವಾರಿಯಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಆದರೆ ಡಾ.ಪ್ರೀತನ್ ನಾಗಪ್ಪ ಅವರಿಗೆ ಬೆಂಬಲ ಸೂಚಿಸದೆ ತಟಸ್ಥವಾಗಿ ಉಳಿದಿದ್ದರು. ಈ ದಿಸೆಯಲ್ಲಿ ಬೆಳಗ್ಗೆ 10.30ರಲ್ಲಿ ಹನೂರಿನ ಹೊರ ವಲಯದಲ್ಲಿರುವ ನಿಶಾಂತ್ ಕಚೇರಿಗೆ ಪ್ರೀತನ್ ನಾಗಪ್ಪ ತಮ್ಮ ಬೆಂಬಲಿಗರೊಂದಿಗೆ ತೆರಳಿದ್ದು, ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.


ತೀವ್ರ ವಾಗ್ವಾದ: ನಿಶಾಂತ್ ಹಾಗೂ ಪ್ರೀತನ್ ನಾಗಪ್ಪ ನಡುವೆ ನಡೆದ ಗೌಪ್ಯ ಸಭೆಯಲ್ಲಿ ಈ ಇಬ್ಬರ ಬೆಂಬಲಿಗರು ಸಹ ಭಾಗವಹಿಸಿದ್ದರು. ಈ ವೇಳೆ ಡಾ.ಪ್ರೀತನ್ ನಾಗಪ್ಪಗೆ ಬೆಂಬಲ ಸೂಚಿಸುವಂತೆ ಮಾತುಗಳು ವ್ಯಕ್ತವಾದವು. ಈ ವೇಳೆ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆಯಿತಲ್ಲದೇ ನಿಶಾಂತ್ ಮಾತನಾಡಿ, ನಾನು ಒಬ್ಬ ವೀರಶೈವ ಲಿಂಗಾಯತ. ಆದರೆ ನಮ್ಮ ಸಮುದಾಯದವರೇ ಆದ ಡಾ.ಪ್ರೀತನ್ ನಾಗಪ್ಪ ಅವರ ಬೆಂಬಲಿಗರು ನನಗೆ ಕಿರುಕುಳ ನೀಡಿದ್ದಾರೆ. ಬಂಡಳ್ಳಿ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ನನ್ನನ್ನು ವಿರೋಧಿಸಿ ಧಿಕ್ಕಾರ ಕೂಗಿದ್ದಾರೆ. ಅಂತಹದರಲ್ಲಿ ಇದೀಗ ಬೆಂಬಲ ಸೂಚಿಸುವಂತೆ ಆಗಮಿಸಿರುವುದು ಎಷ್ಟರ ಮಟ್ಟಿಗೆ ಸರಿ? ಆ ವೇಳೆ ನಾನು ಲಿಂಗಾಯತನಲ್ಲವೇ, ಈಗ ಲಿಂಗಾಯತನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.


ವೀರಶೈವ ಮಹಾಸಭಾ ಅಧ್ಯಕ್ಷರನ್ನು ಕುರಿತು, ಇದೀಗ ನಾನು ಲಿಂಗಾಯತ ಎಂದು ಮಾತನಾಡಿಸಲು ಬಂದಿದ್ದೀರಾ? ವಿಶ್ವಾಸಕ್ಕಾದರೂ ಒಂದು ದಿನ ಭೇಟಿ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆಯಿತಾದರೂ ನಿಶಾಂತ್, ನಾನು ಯಾವತ್ತೂ ಪಕ್ಷಕ್ಕೆ ಅನ್ಯಾಯ ಮಾಡಿಲ್ಲ. ಪಕ್ಷದ ವಿರುದ್ಧ ನಡೆದುಕೊಂಡಿಲ್ಲ. ಹಾಗಾಗಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಒಲ್ಲದ ಮನಸ್ಸಿನಿಂದ ತಿಳಿಸಿದರು. ಡಾ.ಪ್ರೀತನ್ ನಾಗಪ್ಪ ಬೆಂಬಲಿಗರು ಚಪ್ಪಾಳೆ ತಟ್ಟಿ ಕೊಂಚ ನಿಟ್ಟುಸಿರು ಬಿಟ್ಟರು. ಆದರೂ ಕಚೇರಿಯಿಂದ ಹೊರಬರುವಾಗ ಪ್ರೀತನ್ ಮುಖದಲ್ಲಿ ಕಳವಳ ವ್ಯಕ್ತವಾದಂತೆ ಕಂಡುಬಂತು.


ಬೆಂಬಲಿಗರಲ್ಲೇ ಅಸಮಾಧಾನ: ಗೌಪ್ಯಸಭೆಯಲ್ಲಿ ಮಾತಿನ ಚಕಮಕಿ ನಡೆದದ್ದರಿಂದ ಅಸಮಾಧಾನಗೊಂಡ ಪ್ರೀತನ್ ನಾಗಪ್ಪ ಕೆಲ ಬೆಂಬಲಿಗರು ಕಚೇರಿಯಿಂದ ಹೊರಬಂದು ನಿಂತಿದ್ದರು. ಈ ವೇಳೆ ಪ್ರೀತನ್ ಸಭೆ ಮುಗಿಸಿ ಯಡಕುರಿಯ ಗ್ರಾಮಕ್ಕೆ ಮತ ಪ್ರಚಾರಕ್ಕೆ ತೆರಳಿದರು. ಬಳಿಕ ಬೆಂಬಲಿಗರಲ್ಲೇ ಒಗ್ಗಟ್ಟಿನ ಸಂಬಂಧ ಅಸಮಾಧಾನದ ಮಾತುಗಳು ಕೇಳಿಬಂದವು. ಇದರಿಂದ ಅವರವರಲ್ಲೇ ಕಸಿವಿಸಿ ಉಂಟಾಯಿತು.


ಸಭೆಯಲ್ಲಿ ನಿಶಾಂತ್ ಬೆಂಬಲಿಗರಾದ ಸುರೇಶ್, ನಿಂಗಶೆಟ್ಟಿ, ಮಾದೇವ, ಚೇತನ್, ತೇಜು, ಮಾದೇಶ, ಕಣ್ಣಪ್ಪ, ಮೋಹನ್, ದಿವ್ಯಾನಂದಮೂರ್ತಿ ಹಾಗೂ ಡಾ.ಪ್ರೀತನ್ ನಾಗಪ್ಪ ಬೆಂಬಲಿಗರಾದ ಕಣ್ಣೂರು ಬಸವರಾಜಪ್ಪ, ಮಂಗಲ ಪ್ರಕಾಶ್, ಆನಾಪುರದ ಉಮೇಶ್, ಕೆಂಚಪ್ಪ, ಸುಬ್ಬಣ್ಣ, ಜಡೇಸ್ವಾಮಿ, ನಾಗರಾಜು ಹಾಗೂ ಇನ್ನಿತರರು ಇದ್ದರು.