ಜಿಲ್ಲೆ

ಡಾ.ಪಿ.ಎಸ್.ಶಂಕರ್‌ಗೆ ಮೈಸೂರು ವಿವಿ ಗೌರವ ಡಾಕ್ಟರೇಟ್

ಕಲಬುರಗಿ: ದೇಶದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯವು ಅಕ್ಟೋಬರ್ ೧೮ರಂದು ನಡೆಯಲಿರುವ ೧೦೩ನೇ ವಾರ್ಷಿಕ ಘಟಿಕೋತ್ಸವದಲ್ಲಿ ಖ್ಯಾತ ವೈದ್ಯಕೀಯ ಶಿಕ್ಷಕ, ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ.ಎಸ್.ಶಂಕರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.

ಈ ಕುರಿತು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪ್ರಕಟಣೆ ಹೊರಡಿಸಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶಂಕರ್ ಅವರ ಉತ್ಕೃಷ್ಟ ಕೊಡುಗೆ, ಸಾಮಾನ್ಯ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಡಾ.ಶಂಕರ್ ಅವರ ಸೇವೆ ಪರಿಗಣಿಸಿ ಆರನೇ ಬಾರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಎನ್‌ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆಂಧ್ರಪ್ರದೇಶ, ಗುಲ್ಬರ್ಗ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.

ಫೆಲೋ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಅಮೇರಿಕನ್ ಕಾಲೇಜ್ ಆಫ್ ಚೆಸ್ಟ್ ಫಿಜೀಶಿಯನ್ಸ್, ರಾಯಲ್ ಕಾಲೇಜ್ ಆಫ್ ಫಿಜೀಶಿಯನ್ಸ್ ಮತ್ತು ಕರ್ನಾಟಕ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಅಕಾಡೆಮಿಯಿಂದ ಡಾ. ಶಂಕರ್ ಅವರು ಎರಡು ಬಾರಿ ಪ್ರತಿಷ್ಠಿತ ಡಾ.ಬಿ.ಸಿ. ರಾಯ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಂಗ್ಲಿಷ ಮತ್ತು ಕನ್ನಡದಲ್ಲಿ ವೈದ್ಯಶಾಸ್ತçದ ವಿವಿಧ ಅಂಶಗಳ ಬಗ್ಗೆ ಪುಸ್ತಕಗಳ ಸಮೃದ್ಧ ಬರಹಗಾರರಾದ ಇವರು ಈವರೆಗೆ ೨೫೦ಕ್ಕೂ ಹೆಚ್ಚು ಪುಸ್ತಕ ಮತ್ತು ಕನ್ನಡದಲ್ಲಿ ವೈದ್ಯಕೀಯ ಪುಸ್ತಕಗಳನ್ನು ಜನಪ್ರಿಯಗೊಳಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಡಾ.ಶಂಕರ್ ಅವರು ಕರ್ನಾಟಕ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ದಾಖಲೆಯ ೬೧ ವರ್ಷಗಳಿಂದ ವೈದ್ಯಕೀಯ ಪ್ರಾಧ್ಯಾಪಕರಾಗಿದ್ದಾರೆ. ವೈದ್ಯಕೀಯದಲ್ಲಿ ಹಲವಾರು ಪಠ್ಯಪುಸ್ತಕ ಬರೆದು ಸಂಪಾದಿಸುವುದರ ಜತೆಗೆ, ಡಾ.ಶಂಕರ ಅವರು ಕಳೆದ ೧೭ ವರ್ಷಗಳಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹೊರತಂದ ವಿಜ್ಞಾನ ಜರ್ನಲ್, ವಿಜ್ಞಾನ ಲೋಕದ ಸಂಪಾದಕರಾಗಿದ್ದಾರೆ. ಕಳೆದ ೧೩ ವರ್ಷಗಳಿಂದ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‌ನ ಕನ್ನಡ ಜರ್ನಲ್‌ಗಳ ಸಂಪಾದಕರಾಗಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾ. ಶಂಕರ್ ಅವರ, ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ವೈದ್ಯಕೀಯ ವಿಶ್ವಕೋಶ ಹೊರತಂದಿದೆ. ಹೆಚ್ಚುವರಿ ಮಾಹಿತಿ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿ ಹಾಗೂ ವಿಶ್ವಕೋಶದ ೨ನೇ ಆವೃತ್ತಿ ಹೊರತರಲಾಗುತ್ತಿದೆ.