ಕಮಲನಗರ: ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು ಜೀವನದುದ್ದಕ್ಕೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಅಧ್ಯಾತ್ಮಿಕ ಕ್ಷೇತ್ರಗಳ ಸೇವೆ ಮೂಲಕ ಅಮೋಘ ಕ್ರಾಂತಿಗೈದಿದ್ದಾರೆ. ಗಡಿಭಾಗದಲ್ಲಿ ಅವರ ಕಾರ್ಯಗಳು ಅವಿಸ್ಮರಣೀಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಖೇಡ-ಸಂಗಮ ಗ್ರಾಮದ ನಿಲಾಂಬಿಕಾ ಆಶ್ರಮದಲ್ಲಿ ಭಾನುವಾರ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ, ಡಾ.ಮಹಾದೇವಮ್ಮ ತಾಯಿ ಅವರ ದಿವ್ಯಾಂಗ ದೀಪ್ತಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಮನೆಯಲ್ಲಿ ಮಹಾಮನೆ ಬೆಳ್ಳಿ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತೀಯತೆ, ಸಾಮಾಜಿಕ ಮೌಢ್ಯ ಮತ್ತು ಅಜ್ಞಾನದ ಕತ್ತಲೆಯನ್ನ ಹೊಡೆದೊಡಿಸಿ ಕಲ್ಯಾಣ ನಾಡಿನಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ರಾಂತಿಗೈದ ಶ್ರೇಯಸ್ಸು ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದರು.
ಹುಲಸೂರ ಮಠದ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ನಿಜಾಮರ ಆಳ್ವಿಕೆಯಲ್ಲಿ ಅನೇಕ ತರಹದ ದಬ್ಬಾಳಿಕೆ, ವಿರೋಧದ ನಡುವೆಯೂ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಭಾಷೆ ಕಲಿಸುವುದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿರಿಸಿ, ಹನ್ನೆರಡನೇ ಶತಮಾನದ ಬಸವಾದಿ ಶರಣರ ತತ್ವಗಳನ್ನು ಅನುಸರಿಸಿಕೊಂಡು ಬಂದಿರುವ ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಕನ್ನಡಿಗರ ಮನೆ ದೇವರಾಗಿದ್ದಾರೆ ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ದಿವ್ಯ ನೇತೃತ್ವ ವಹಿಸಿದ್ದರು.
ಪ್ರೇಮಾ ರಾಜಶೇಖರ ಪಾಟೀಲ್ ದಿವ್ಯಾಂಗ ದೀಪ್ತಿಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿದರು.
ಕೊಡ್ಲಾ ಶಂಭುಲಿಂಗಾಶ್ರಮದ ಶ್ರೀ ಶಂಭುಲಿಂಗ ಶಿವಾಚಾರ್ಯ, ಖೇಡ-ಸಂಗಮ ಆಶ್ರಮದ ಮಹಾದೇವಮ್ಮ ತಾಯಿ, ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮಿ, ಉದಗೀರನ ಚೌಕಿ ಮಠದ ಶ್ರೀ ಅಲ್ಲಮ ಪ್ರಭು ಸ್ವಾಮಿ, ಧೂಮ್ಮನಸೂರು ಮಠದ ಶ್ರೀ ಶಂಕರಲಿಂಗ ಸ್ವಾಮಿ, ಗೀತಾ ಈಶ್ವರ ಖಂಡ್ರೆ, ಹುಮನಾಬಾದ್ ಘಟಕದ ಜಾನಪದ ಪರಿಷತ್ ಅಧ್ಯಕ್ಷೆ ಶೀಲಾಬಾಯಿ ಸ್ವಾಮಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಧ್ಯಕ್ಷ ಶಂಭುಲಿಂಗ ಕಾಮಣ್ಣ, ಪ್ರಕಾಶ ಟೊಣ್ಣೆ, ಮಲ್ಲಿಕಾರ್ಜುನ ದಾನಾ, ಸಂಜುಕುಮಾರ ಜುಮ್ಮಾ ಇತರರಿದ್ದರು. ಡಾ.ಮಹೇಶ ಬಿರಾದಾರ, ಡಾ.ಸಚಿನ ಗುದಗೆ, ಡಾ.ಧನರಾಜ ರಾಗಾ, ಡಾ.ವಿಕ್ರಮ, ಡಾ.ರಾಜೇಂದ್ರ ಧನ್ನೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ದಾಸೋಹ ರತ್ನ ಪ್ರಶಸ್ತಿ : ವಿವಿಧ ಕ್ಷೇತ್ರದಲ್ಲಿ ದಾಸೋಹ ಸೇವೆ ಸಲ್ಲಿಸುತ್ತಿರುವ ಹತ್ತು ಜನ ಶರಣೆಯರಿಗೆ ದಾಸೋಹ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೆರುಗು ಹೆಚ್ಚಿಸಿದ ಮೆರವಣಿಗೆ: ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೂ ಮುನ್ನ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಹುಮನಾಬಾದ್ ಘಟಕದ ಜಾನಪದ ಪರಿಷತ್ ಅಧ್ಯಕ್ಷೆ ಶೀಲಾಬಾಯಿ ಸ್ವಾಮಿ ಚಾಲನೆ ನೀಡಿದರು. ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಿಂದ ಆರಂಭಗೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕ, ಸರ್ಕಾರಿ ಪ್ರಾಥಮಿಕ ಶಾಲೆ, ಖೇಡ ಮುಖ್ಯ ರಸ್ತೆಯಿಂದ ಸಾಗಿ ಖೇಡ-ಸಂಗಮನ ನೀಲಾಂಬಿಕಾ ಆಶ್ರಮಕ್ಕೆ ಬಂದು ತಲುಪಿತು. ಶಾಲಾ ಮಕ್ಕಳಿಂದ ವಚನ ನೃತ್ಯ, ಕೋಲಾಟ, ಭಜನೆ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಭಕ್ತರು ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ಡಾ. ಚನ್ನಬಸವ ಪಟ್ಟದ್ದೇವರಿಗೆ ಜಯವಾಗಲಿ ಎಂಬ ಘೋಷಣೆ ಕೂಗಿ ಅಭಿಮಾನ ವ್ಯಕ್ತಪಡಿಸಿದರು.
ಲಿಂ.ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಅನುಸರಿಸಿಕೊಂಡು ಬಂದಿದ್ದ ತತ್ವಾದರ್ಶಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ, ಪರೋಪಕಾರಿ ಜೀವನ ಸಾಗಿಸಬೇಕು.
| ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ
ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನುಡಿದಂತೆ ನಡೆದಿರುವ ಚನ್ನಬಸವ ಪಟ್ಟದ್ದೇವರು ನಮ್ಮ ನಾಡು ಕಂಡ ಶ್ರೇಷ್ಟ ಸಂತರಾಗಿದ್ದಾರೆ.
| ಶ್ರೀಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಭಾಲ್ಕಿ ಹಿರೇಮಠ ಸಂಸ್ಥಾನ