ಜಿಲ್ಲೆ

ಡಾ. ಪಂಚಾಕ್ಷರಿ ಹಿರೇಮಠ ಸೇವೆ ಸ್ಮರಣೀಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ನಿಧನ ಹಿನ್ನೆಲೆಯಲ್ಲಿ ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಹಿಂದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಮಾತನಾಡಿ, ಅನೇಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಪಂಚಾಕ್ಷರಿ ಅವರ ನಿಧನದಿಂದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಒಬ್ಬ ಹಿರಿಯ ಅನುವಾದಕ ಸಾಹಿತಿಯನ್ನು ಕಳೆದುಕೊಂಡಿದೆ. ಕನ್ನಡ ಅಧ್ಯಯನ ಪೀಠದಲ್ಲಿ ಕಾರ್ಯ ನಿರ್ವಹಿಸುವಾಗ ಹಲವು ಭಾಷೆಗಳನ್ನು ಅನುವಾದ ಮಾಡುವ ಮೂಲಕ ಬಹುಭಾಷಾ ಅನುವಾದಕ, ಕವಿಯಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಗೆ ಅವರು ನೀಡಿದ ಸೇವೆ ಅವಿಸ್ಮರಣೀಯ ಎಂದರು.

ಪಂಚಾಕ್ಷರಿ ಹಿರೇಮಠರು ಪ್ರಕಟಿಸಿದ ಹಿಂದಿ ಅನುವಾದ ಸಾಹಿತ್ಯ ಮರುಪ್ರಕಟಿಸಿ ಮುಂದಿನ ದಿನಗಳಲ್ಲಿ ಮಾನಗಳಲ್ಲಿ ಅವರ ಚಿಂತನೆಗಳು ನಮ್ಮೆಲ್ಲರ ನಡುವೆ ಶಾಶ್ವತವಾಗಿ ಇರುವಂತೆ ಮಾಡಲಾಗುವುದು ಎಂದರು.

ಕಾರ್ಯಕಾರಿಣಿ ಸದಸ್ಯ ಬಸವರಾಜ ತಾಳೀಕೋಟಿ ಮಾತನಾಡಿ, ಡಾ. ಪಂಚಾಕ್ಷರಿ ಹಿರೇಮಠ ಶ್ರೇಷ್ಠ ವಾಗ್ಮಿಗಳಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ. ಕನ್ನಡ ಸಾಹಿತ್ಯ ಲೋಕಕ್ಕೆ ಮಾತ್ರ ಸೀಮಿತವಾಗದೆ, ಅಂತರಾಷ್ಟ್ರೀಯ ಬುಹುಭಾಷಾ ಅನುವಾದಕರನ್ನು ಕಳೆದುಕೊಂಡಿದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಬಸವರಾಜ ವಸ್ತ್ರದ, ಜಿ.ಜಿ. ಹಿರೇಮಠ, ಜಗದೀಶ ಮಳಗಿ, ಉಮಾ ಚವ್ಹಾಣ, ಎಸ್​. ರಾಧಾಕೃಷ್ಣನ್​, ವೀಣಾ ತುಪ್ಪದ, ಸುರೇಖಾ ಚಾಂದಗುಡೆ, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.